ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭಾನುವಾರ ರಾತ್ರಿ ಗಣೇಶ ಮುರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಸೋಮವಾರ ಬಿಜೆಪಿ ಹಾಗೂ ಸಂಘಪರಿವಾರ ಕಾರ್ಯಕರ್ತರು ಮದ್ದೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೋಟೆ ಬೀದಿಯ ಉಗ್ರನರಸಿಂಹಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಸಾಗಿತು. ಸಾವಿರಾರು ಬಿಜೆಪಿ ಹಾಗೂ ಸಂಘಪರಿವಾರ ಪರ ಕಾರ್ಯಕರ್ತರು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಕೆಮ್ಮಣ್ಣು ನಾಲೆ ವೃತ್ತದ ಮಸೀದಿ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆ ಬಿಗುವಿನ ವಾತಾವರಣ ಏರ್ಪಟ್ಟಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಕಿಡಿಗೇಡಿಗಳು ಮಸೀದಿಯತ್ತ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಕಾರ್ಯಕರ್ತರನ್ನು ಚದುರಿಸಿದರು. ನಂತರ ಪರಿಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಇಂದ್ರೇಶ್, ಬಿಜೆಪಿ ಮುಖಂಡರಾದ ಎಸ್.ಪಿ.ಸ್ವಾಮಿ ಸೇರಿದಂತೆ ಇತರರು ಇದ್ದರು.