ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಗ್ರಾಮದಲ್ಲಿ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಸವರ್ಣೀಯರು ಮತ್ತು ದಲಿತರ ನಡುವೆ ಸಂಘರ್ಷ ಉಂಟಾಗಿದ್ದು, ಈ ಸಂಬಂಧ ಸೋಮವಾರ ಎಲೆಚಾಕನಹಳ್ಳಿಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸಮ್ಮುಖದಲ್ಲಿ ಸೋಮವಾರ ಶಾಂತಿಸಭೆ ನಡೆಯಿತು.
ಸಭೆಯಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ಗ್ರಾಮದಲ್ಲಿ ಎಲ್ಲ ಜಾತಿ ಸಮುದಾಯದ ಜನರು ಸೌಹಾರ್ದಯುತವಾಗಿ ಬದುಕಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದರೂ ಇನ್ನೂ ಅಸ್ಪೃಶತೆ ಆಚರಣೆ ಮಾಡುತ್ತಿರುವುದು ಸರಿಯಲ್ಲ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, “ಸಂವಿಧಾನದ ಪ್ರಕಾರ ಎಲ್ಲಾ ಜಾತಿ ಸಮುದಾಯಗಳಿಗೆ ದೇವಾಲಯ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಪ್ರವೇಶ ನೀಡಬೇಕು, ಈಗಿನ ಆಧುನಿಕ ಪ್ರಪಂಚದಲ್ಲಿಯೂ ಅಸ್ಪೃಶ್ಯತೆ ಆಚರಣೆ ಮಾಡುವುದು ಸರಿಯಲ್ಲ. ಮೇಲ್ವರ್ಗದ ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಕೊಳ್ಳಬೇಕು. ಈ ಬಗ್ಗೆ ಆಯಾ ಕೋಮಿನ ಮುಖಂಡರು ತಮ್ಮ ಜನರಿಗೆ ತಿಳಿ ಹೇಳಬೇಕು. ಮುಂದಿನ 15 ದಿನಗಳಲ್ಲಿ ಮೇಲ್ವರ್ಗದವರು ಈ ಕುರಿತು ಸೂಕ್ತ ನಿರ್ಧಾರಕ್ಕೆ ಬರಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು ದಲಿತರಿಗೆ ನ್ಯಾಯ ಒದಗಿಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ, ಎರಡು ಕೋಮುಗಳ ಜನರನ್ನು ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು.
ಸಭೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ದಸಂಸ ಮುಖಂಡ ವೆಂಕಟಗಿರಿಯಯ್ಯ, ವಕೀಲ ಚೀರನಹಳ್ಳಿ ಲಕ್ಷ್ಮಣ್, ದಲಿತರ ಹಕ್ಕುಗಳ ಸಮಿತಿಯ ಆರ್.ಕೃಷ್ಣ, ಬಿಎಸ್ಪಿ ಮುಖಂಡ ಶಿವಶಂಕರ್ ಸೇರಿದಂತೆ ಗ್ರಾಮದ ವಿವಿಧ ಕೋಮುಗಳ ಮುಖಂಡರು ಭಾಗವಹಿಸಿದ್ದರು.