ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಗಳನ್ನು ನಡೆಸಬಾರದು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಸ್ಫೋಟಕಗಳ ಬಳಕೆಯಿಂದಾಗಿ ಜಲಾಶಯಕ್ಕೆ ಅಪಾಯವಿದೆ ಎಂಬುದರ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.
2023ರ ಮೇನಲ್ಲಿ ಮಂಡ್ಯ ಜಿಲ್ಲಾಧಿಕಾರಿ ವಿಧಿಸಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಪಾಂಡವಪುರ ತಾಲೂಕಿನ ಚಿನಕುರುಳಿಯ ಭೂಮಾಲೀಕ ಸಿ.ಜಿ ಕುಮಾರ್ ಎಂಬವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗದ ಪೀಠವು ವಿಚಾರಣೆ ನಡೆಸುತ್ತಿದೆ.
“ಗಣಿಗಾರಿಕೆಗೆ ಪರವಾನಗಿ ಹೊಂದಿರುವ ಹಾಗೂ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿರುವ ಗಣಿಗಾರಿಕೆಗಳಿಗೂ ಈ ನಿಷೇಧ ಅನ್ವಯಿಸುತ್ತದೆ. ಈ ಹಿಂದೆ, ಅಣೆಕಟ್ಟು ಸುರಕ್ಷತಾ ಕಾಯ್ದೆ-2021ರ ಅಡಿಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳನ್ನು ನ್ಯಾಯಾಲಯದ ಗಮನಕ್ಕೆ ತರದಿದ್ದ ಕಾರಣ, 20 ಕಿ.ಮೀ ವ್ಯಾಪ್ತಿಯೊಳಗೆ ಗಣಿಗಾರಿಕೆಗೆ ಅನುಮತಿ ನೀಡಲಾಗಿತ್ತು. ಆದರೆ, ಇನ್ನುಮುಂದೆ ಯಾವುದೇ ಗಣಿಕಾರಿಕೆ ನಡೆಯಬಾರದು” ಎಂದು ಕೋರ್ಟ್ ಹೇಳಿದೆ.
ಜಲಾಶಯದ ಮಹತ್ವನ್ನು ಒತ್ತಿ ಹೇಳಿರುವ ಹೈಕೋರ್ಟ್, “ಕಾವೇರಿ ನೀರಿಗಾಗಿ ಮೂರು ರಾಜ್ಯಗಳು ಹೋರಾಡುತ್ತವೆ. ಆದರೆ, ಯಾರೂ ಅಣೆಕಟ್ಟನ್ನು ರಕ್ಷಿಸುತ್ತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಜಲಾಶಯವು ಪರಂಪರೆ ಮತ್ತು ಐತಿಹಾಸಿಕ ಮೌಲ್ಯಗಳನ್ನು ಹೊಂದಿದೆ. ಮೈಸೂರಿನ ಹಿಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯಿಂದ ಅಣೆಕಟ್ಟು ನಿರ್ಮಿಸಿದ್ದಾರೆ. ಈ ಅಣೆಕಟ್ಟನ್ನು ಗಣಿಗಾರಿಕೆ ಚಟುವಟಿಕೆಗಳಿಂದ ರಕ್ಷಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ. ಮುಂದಿನ ಆದೇಶಗಳವರೆಗೆ, ಜಲಾಶಯದ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಬಿಲ್ಕಿಸ್ ಬಾನೊ ಅರ್ಜಿ ಎತ್ತಿ ಹಿಡಿದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
“ಅಣೆಕಟ್ಟು ಸುರಕ್ಷತಾ ಕಾಯ್ದೆಯ ಪ್ರಕಾರ, ತಜ್ಞರು ನಿರ್ಧಾರ ತೆಗೆದುಕೊಳ್ಳುವವರೆಗೂ ಜಲಾಶಯದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು” ಎಂದು ನಿರ್ಬಂಧ ಹೇರಿ ಮಂಡ್ಯ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ತಜ್ಞರು ಪ್ರಾಯೋಗಿಕ ಸ್ಫೋಟಗಳನ್ನು ನಡೆಸಿ, ವರದಿ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಅಣೆಕಟ್ಟಿನ ಮೇಲೆ ಗಣಿಗಾರಿಕೆಯ ಪ್ರಭಾವವನ್ನು ನಿರ್ಣಯಿಸಲು ಪ್ರಾಯೋಗಿಕ ಸ್ಫೋಟಗಳನ್ನು ನಡೆಸಲು ಸೂಕ್ತ ಪರಿಸ್ಥಿತಿಗಾಗಿ ಅವರು ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.