ಶನಿವಾರ (ಡಿ.23) ರಾತ್ರಿ 8.15ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ಕೊನೇ ಕ್ಷಣದಲ್ಲಿ ರದ್ದು ಮಾಡಿದ ಹಿನ್ನೆಲೆಯಲ್ಲಿ, ಪ್ರಯಾಣಿಕರು ಆಕ್ರೋಶಗೊಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯ ಬಗ್ಗೆ ವರದಿಯಾಗಿದೆ.
ಮಂಗಳೂರಿನ ಬಜ್ಪೆ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 8.15ಕ್ಕೆ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ ಹೊರಡಬೇಕಿತ್ತು. ಆದರೆ, ವಿಮಾನ ಬಾರದ ಕಾರಣದಿಂದ ಆಕ್ರೋಶಗೊಂಡಿದ್ದರು. ಇದರಿಂದ ಬೆಂಗಳೂರಿನ ಮೂಲಕ ಅಮೆರಿಕಕ್ಕೆ ಪ್ರಯಾಣ ಬೆಳೆಸಬೇಕಿದ್ದವರು, ಪರೀಕ್ಷೆ ಬರೆಯಲು ಹೊರಟವರು ಹಾಗೂ ಕ್ರಿಸ್‌ಮಸ್ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು, ವಿಮಾನ ಬಾರದ ಕಾರಣ ಮಂಗಳೂರು ವಿಮಾನ ನಿಲ್ದಾಣದಲ್ಲೇ ಬಾಕಿ ಆಗಿದ್ದರು.
ಮಂಗಳೂರು | ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಕೊನೆಯ ಕ್ಷಣದಲ್ಲಿ ರದ್ದು: ಪ್ರಯಾಣಿಕರಿಂದ ಆಕ್ರೋಶ
ಶನಿವಾರ (ಡಿ.23) ರಾತ್ರಿ 8.15ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ
ಬೆಳಗಿನ ಜಾವ 2.15ಕ್ಕೆ ಬೇರೊಂದು ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ ಏರ್ ಇಂಡಿಯಾ@mlrairport @BLRAirport @airindia pic.twitter.com/rzQM9JR5lA
— eedina.com (@eedinanews) December 24, 2023
ಪ್ರಯಾಣಿಕರೆಲ್ಲರೂ ಇನ್ನೇನು ವಿಮಾನ ಹತ್ತಬೇಕೆನ್ನುವ ಹೊತ್ತಿಗೆ ವಿಮಾನವೇ ಇಲ್ಲ ಎಂದು ತಿಳಿದು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಾಳ್ಮೆಯ ಕಟ್ಟೆ ಒಡೆದಿದ್ದು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಿಬ್ಬಂದಿಗಳ ಮೇಲೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋವನ್ನು ಇತರೆ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ನಾವು ತುರ್ತಾಗಿ ಹೋಗಲೇಬೇಕು, ಪರ್ಯಾಯ ವ್ಯವಸ್ಥೆ ಮಾಡಿ ಎಂದು ವಿಮಾನ ಸಿಬ್ಬಂದಿ ಮೇಲೆ ಪ್ರಯಾಣಿಕರು ದುಂಬಾಲು ಬಿದ್ದಿದ್ದರು. ಸಿಬ್ಬಂದಿ ಪ್ರಯಾಣಿಕರನ್ನು ಸಮಾಧಾನ ಮಾಡಲೆತ್ನಿಸಿದರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ, ಏರ್ ಇಂಡಿಯಾ ಸಿಬ್ಬಂದಿ ವಿಮಾನವು ತೊಂದರೆಗೀಡಾಗಿದ್ದು, ತಾಂತ್ರಿಕ ಅಡಚಣೆಯಿಂದ ಬೆಂಗಳೂರಿನಲ್ಲಿಯೇ ಉಳಿದಿದೆ ಎನ್ನಲಾಗಿದೆ.
ಬೆಳಗಿನ ಜಾವ 2.15ಕ್ಕೆ ಬೇರೆ ವಿಮಾನ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೊನೆಗೆ ಏರ್ ಇಂಡಿಯಾ ಪರ್ಯಾಯ ವ್ಯವಸ್ಥೆ ಮಾಡಿದ್ದು, ಬೆಳಗಿನ ಜಾವ 2.15ಕ್ಕೆ ಬೇರೊಂದು ವಿಮಾನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ.
ರಾತ್ರಿ 8.15ಕ್ಕೆ ಹೊರಡಬೇಕಿದ್ದ ವಿಮಾನಕ್ಕಾಗಿ ಬಂದಿದ್ದ ಪ್ರಯಾಣಿಕರು ಬದಲಿ ವ್ಯವಸ್ಥೆಗಾಗಿ ವಿಮಾನ ನಿಲ್ದಾಣದಲ್ಲಿಯೇ ನಡುರಾತ್ರಿಯವರೆಗೆ ಕಾದು ಕುಳಿತು ಬಳಿಕ ಪ್ರಯಾಣಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರಿನಲ್ಲಿ ದಟ್ಟ ಮಂಜಿನಿಂದ ವಿಮಾನಗಳ ಹಾರಾಟ ವಿಳಂಬ
ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ದಟ್ಟ ಮಂಜು ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿದೆ.
ದೇವನಹಳ್ಳಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮುಂಜಾನೆ 5 ರಿಂದ 7ರವರೆಗೆ ದಟ್ಟ ಮಂಜು ಆವರಿಸಿತ್ತು. ಇದರಿಂದಾಗಿ 20ಕ್ಕೂ ಹೆಚ್ಚು ವಿಮಾನಗಳ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯಾಸಗಳಾಗಿದೆ. ಮಂಜು ಕಡಿಮೆಯಾದ ನಂತರ ವಿಮಾನ ಪ್ರಯಾಣವನ್ನು ಮುಂದುವರಿಸಲಾಯಿತಾದರೂ, ಕೆಲ ಪ್ರಯಾಣಿಕರು ಪ್ರಯಾಣ ರದ್ದು ಮಾಡಿ ವಾಪಸ್ ತೆರಳಿರುವುದಾಗಿ ವರದಿಯಾಗಿದೆ.