ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ಟಾಯ್ಲೆಟ್‌ನಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ್ದ ಅಪ್ರಾಪ್ತನೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇನಲ್ಲಿ ನಡೆದಿದೆ. ಮೇ 6ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೆಡಿಕಲ್ ಕಾಲೇಜಿಗೆ ರೋಗಿಯ ನೆಪದಲ್ಲಿ ಬಂದಿದ್ದ ಅಪ್ರಾಪ್ತನೋರ್ವ, ಬಳಿಕ ಅಲ್ಲೇ ಇದ್ದ ಲೇಡಿಸ್ ಟಾಯ್ಲೆಟ್‌ಗೆ ನುಗ್ಗಿ ಮೊಬೈಲ್ ಇಟ್ಟಿದ್ದಾನೆ. ಮೊಬೈಲ್ ಇಟ್ಟುಬಂದ ಸ್ವಲ್ಪ ಹೊತ್ತಿನಲ್ಲೇ ಮೊಬೈಲ್ ರಿಂಗ್ ಆಗುವುದು ಅಕ್ಕಪಕ್ಕದಲ್ಲಿದ್ದವರಿಗೆ ಕೇಳಿಸಿದೆ.
ಕೂಡಲೇ ಟಾಯ್ಲೆಟ್ ಕೊಠಡಿಯೊಳಗೆ ಬಂದ ಭದ್ರತಾ ಸಿಬ್ಬಂದಿ, ಹುಡುಕಾಡಿದಾಗ ಮೊಬೈಲ್ ಕಣ್ಣಿಗೆ ಬಿದ್ದಿದೆ. ಸದ್ಯ ಮೊಬೈಲ್‌ನಲ್ಲಿ ಯಾವುದೇ ದೃಶ್ಯ ಸೆರೆಯಾಗಿಲ್ಲ ಎಂದು ತಿಳಿದುಬಂದಿದೆ. ಆ ಬಳಿಕ ಬಂದರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಲ್ಲದೇ, ಈ ಸಂಬಂಧ ದೂರು ಕೂಡ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸರು, ತನಿಖೆ ನಡೆಸಲು ಕಾಲೇಜಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ಇಟ್ಟವರು ಯಾರೆಂದು ಬೆಳಕಿಗೆ ಬಂದಿದೆ. ಆ ಬಳಿಕ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, “ನಗರ ಬಾವುಟ್ಟಗುಡ್ಡದಲ್ಲಿರುವ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ಯಾರೂ ಇಲ್ಲದ ವೇಳೆಯೂ ಮೊಬೈಲ್ ರಿಂಗಾಗುತ್ತಿದ್ದುದನ್ನು ಕಾಲೇಜಿನ ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಫೋನ್ ಅನ್ನು ವಶಪಡಿಸಿಕೊಂಡು ಉತ್ತರ ಪೊಲೀಸರು ಐಪಿಸಿ ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಪ್ರಕರಣದ ಸಂಬಂಧ ಆರೋಪಿ 17 ವರ್ಷದ ಅಪ್ರಾಪ್ತನಾಗಿದ್ದು, ರೋಗಿಯ ವೇಷದಲ್ಲಿ ಕಾಲೇಜಿಗೆ ಬಂದಿದ್ದ. ಆತನನ್ನು ಬಂಧಿಸಿ, ಬಾಲಪರಾಧಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ದೇಶಾದ್ಯಂತ ಸುದ್ದಿಯಾಗಿದ್ದ ‘ಉಡುಪಿ ಕಾಲೇಜಿನ ಪ್ರಕರಣ’
ಉಡುಪಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದ್ದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಹುಡುಗಿಯರ ವಿಡಿಯೋ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
‘ವಿದ್ಯಾರ್ಥಿನಿಯರು ತಮಾಷೆಗೆಂದು ವಿಡಿಯೋ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ’ ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತಾದರೂ, ಈ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಸಂಘಪರಿವಾರದವರು ಮಧ್ಯ ಪ್ರವೇಶಿಸಿದ್ದರಿಂದಾಗಿ ದೇಶಾದ್ಯಂತ ಸುದ್ದಿಯಾಗಿತ್ತು. ಆ ಬಳಿಕ ಸಿಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು.
ಹಿಂದೂ ವಿದ್ಯಾರ್ಥಿನಿ ಔಪಚಾರಿಕವಾಗಿ ದೂರು ದಾಖಲಿಸದಿದ್ದರೂ, ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಸಿಐಡಿಗೆ ಹಸ್ತಾಂತರಿಸಿದ್ದರು. ಪ್ರಕರಣದ ತನಿಖಾಧಿಕಾರಿ ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎರಡು ಸಂಪುಟಗಳಲ್ಲಿ 925 ಪುಟಗಳ ಈ ಚಾರ್ಜ್‌ಶೀಟ್‌ನಲ್ಲಿ 91 ಸಾಕ್ಷಿಗಳನ್ನು ಪರಿಗಣಿಸಲಾಗಿತ್ತು.
