ಮಂಗಳೂರು ನಗರದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಹೊರವಲಯದ ಪೆರ್ಮಂಕಿ ಪರಿಸರದಲ್ಲಿ ಉದ್ಯಮಿ ಹಾಗೂ ಸಾಮಾಜಿಕ ಮುಖಂಡ ಪದ್ಮನಾಭ ಕೋಟ್ಯಾನ್ ಅವರ ಮನೆ ದರೋಡೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, 10 ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
‘ಉದ್ಯಮಿಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನೀರುಮಾರ್ಗ ಗ್ರಾಮದ ನಿವಾಸಿ ವಸಂತಕುಮಾರ್ ಎಂಬಾತನೇ ಈ ಪ್ರಕರಣದ ಸೂತ್ರಧಾರ’ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿಷನರ್, “ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 10 ಮಂದಿಯನ್ನು ಬಂಧಿಸಿದ್ದೇವೆ. ಸುಮಾರು ಏಳೆಂಟು ತಿಂಗಳಿಂದ ಈ ದರೋಡೆ ನಡೆಸಲು ಸಂಚು ರೂಪಿಸಿದ್ದರು. ಉದ್ಯಮಿಯ ಬೆಡ್‌ರೂಮಿನಲ್ಲಿ ಸುಮಾರು ನೂರು ಕೋಟಿ ಹಣ ಅಡಗಿಸಿಡಲಾಗಿದೆ ಎಂದು ನಂಬಿಕೊಂಡು ಈ ಕೃತ್ಯ ಎಸಗಿದ್ದಾರೆ. ಅದಕ್ಕಾಗಿ ದರೋಡೆ ನಡೆಸುವ ಸಮಯದಲ್ಲಿ ಸುಮಾರು ಗೋಣಿಚೀಲಗಳನ್ನು ಕೂಡ ತಂದಿದ್ದರು” ಎಂದು ತಿಳಿಸಿದ್ದಾರೆ.
ಒಟ್ಟು 10 ಮಂದಿಯ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಏಳು ಮಂದಿ ಕೇರಳ ಮೂಲದವರಾಗಿದ್ದರೆ, ಮೂರು ಮಂದಿ ಕರ್ನಾಟಕದವರು ಎಂದು ಪೊಲೀಸರು ತಿಳಿಸಿದ್ದಾರೆ.
ನೀರುಮಾರ್ಗದ ವಸಂತ ಕುಮಾರ್ (42), ನೀರುಮಾರ್ಗದ ರಮೇಶ್ (42), ಬಂಟ್ವಾಳದ ರೇಮಂಡ್ ಡಿಸೋಜಾ (47), ಕೇರಳದ ಕಾಸರಗೋಡಿನ ಬಾಲಕೃಷ್ಣ ಶೆಟ್ಟಿ (48), ತಿರುವನಂತಪುರದ ಬಿಜು ಜಿ (41), ತ್ರಿಶೂರ್‌ನಿಂದ ಝಾಕೀರ್ ಹುಸೇನ್ (56), ವಿನೋಜ್ ಪಿ ಕೆ (38), ಸಜೀಶ್ ಎಂಎಂ (32), ಸತೀಶ್ ಬಾಬು (44), ಮತ್ತು ಶಿಜೋ ದೇವಸಿ (38) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳೂರು ನಗರದ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರು ಜೂನ್ 21ರಂದು ಸಂಜೆ ಸುಮಾರು 7.45ಕ್ಕೆ ಮನೆಯಲ್ಲಿದ್ದ ವೇಳೆ ಸುಮಾರು 10ರಿಂದ 12 ಮಂದಿ ಆರೋಪಿಗಳು ಆಗಮಿಸಿ, ಚೂರಿಯಿಂದ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ನಡೆಸಿ, ನಂತರ, ಅವರ ಪತ್ನಿ ಮತ್ತು ಮಗನನ್ನು ಕಟ್ಟಿಹಾಕಿ, ನಗದು, ಹಣ, ಒಡವೆ ಸೇರಿ ಬೆಲೆಬಾಳುವ ಸೊತ್ತುಗಳನ್ನು ದರೋಡೆ ಮಾಡಿದ್ದರು.
ಘಟನೆಯಲ್ಲಿ ವಸಂತಕುಮಾರ್, ಉದ್ಯಮಿಯ ವ್ಯವಹಾರ ಮತ್ತು ಮನೆಯ ಮಾಹಿತಿಯನ್ನು ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ನೀಡಿದ್ದ. ಆರೋಪಿ ರಮೇಶ್ ಪೂಜಾರಿ ಮತ್ತು ರೇಮಂಡ್ ಡಿಸೋಜಾ ಇನ್ನೋರ್ವ ಆರೋಪಿ ಬಾಲಕೃಷ್ಣ ಶೆಟ್ಟಿಗೆ ಉದ್ಯಮಿಯ ಮನೆಯ ಹಾಗೂ ವ್ಯವಹಾರದ ಮಾಹಿತಿ ನೀಡಿದ್ದಾರೆ. ಅದರಂತೆ ಬಾಲಕೃಷ್ಣ ಶೆಟ್ಟಿ ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆ ನಡೆಸಲು ಸಂಚು ರೂಪಿಸಿ, ಮನೆಯ ಮಾಹಿತಿಯನ್ನು ನೀಡಿ, ಆರೋಪಿಗಳನ್ನು ಮಂಗಳೂರಿಗೆ ಕರೆಯಿಸಿಕೊಂಡು ದರೋಡೆ ನಡೆಸಿದ್ದಾಗಿ ತಿಳಿದುಬಂದಿದೆ ಎಂದು ಕಮಿಷನರ್ ಹೇಳಿದ್ದಾರೆ.
ಕೃತ್ಯದಲ್ಲಿ 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡುಬಂದಿದೆ. ಆರೋಪಿಗಳ ಪೈಕಿ ಬಿಜು ಹಾಗೂ ಸತೀಶ್ ಬಾಬು ಎರಡು ತಂಡಗಳನ್ನು ಮಂಗಳೂರಿಗೆ ಕಳಿಸಿ, ದರೋಡೆಗೆ ಸಂಚು ರೂಪಿಸಿ ದರೋಡೆ ಕೃತ್ಯ ನಡೆಸಿದ್ದಾರೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪೈಕಿ ವಸಂತ ಕುಮಾರ್ ವಿರುದ್ಧ 2011ನೇ ಇಸವಿಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದರೆ, ಝಾಕೀರ್ ಎಂಬಾತನ ವಿರುದ್ಧ ಕೇರಳದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಸತೀಶ್ ಬಾಬು ವಿರುದ್ಧ ತ್ರಿಶೂರ್ ಜಿಲ್ಲೆಯಲ್ಲಿ ಶಾಜಿ ಎಂಬಾತನ ಕೊಲೆ ಪ್ರಕರಣ ದಾಖಲಾಗಿದೆ. ಬಿಜು ವಿರುದ್ಧ ಅಬಕಾರಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.
ಜೂನ್ 21ರಂದು ಎಂಟರಿಂದ ಒಂಬತ್ತು ಮಂದಿ ಮುಸುಕುಧಾರಿಗಳು ಮನೆಗೆ ನುಗ್ಗಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್ ರವರನ್ನು ಕಟ್ಟಿ ಹಾಕಿ ಥಳಿಸಿದ್ದು ಹಾಗೂ ಪತ್ನಿ, ಮಕ್ಕಳನ್ನು ಬೆದರಿಸಿ 9 ಲಕ್ಷ ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿ ಮನೆಯ ವಾಹನದಲ್ಲೇ ಅಲ್ಪ ದೂರದವರೆಗೆ ಪ್ರಯಾಣಿಸಿ ನಂತರ ಅವರ ವಾಹನವನ್ನು ಮಧ್ಯದಲ್ಲೇ ಬಿಟ್ಟು ಇನ್ನೋವಾದಲ್ಲಿ ಪರಾರಿಯಾಗಿದರು. ನಾಲ್ವರು ಸ್ಥಳೀಯ ಆರೋಪಿಗಳಾದ ವಸಂತ್, ರಮೇಶ್, ರೇಮಂಡ್ ಮತ್ತು ಬಾಲಕೃಷ್ಣ ದರೋಡೆಗೆ ಯೋಜನೆ ರೂಪಿಸಿದ್ದರು. ಬಾಲಕೃಷ್ಣ ನಂತರ ಜಾನ್ ಬಾಸ್ಕೋ ನೇತೃತ್ವದ ಕೇರಳ ತಂಡದೊಂದಿಗೆ ಸಂಪರ್ಕ ಹೊಂದಿದ್ದರು.
ಎಂಟು ತಿಂಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಕೇರಳದ ತಂಡ ಮಂಗಳೂರಿಗೆ ಭೇಟಿ ನೀಡಿದ್ದು, ದರೋಡೆಗೆ ಪ್ರದೇಶದ ಸ್ಕೆಚ್ ಮತ್ತು ನಕ್ಷೆಯನ್ನು ಸಿದ್ಧಪಡಿಸುವಂತೆ ರಮೇಶ್ ಮತ್ತು ವಸಂತ್ ಅವರನ್ನು ಕೇಳಿದ್ದರು ಅದರಂತೆಯೇ ಗುತ್ತಿಗೆದಾರನ ಬಳಿ 100ರಿಂದ 300 ಕೋಟಿ ರೂ.ಗೂ ಹೆಚ್ಚು ಹಣವಿದೆ ಎಂದು ಸ್ಥಳೀಯ ಆರೋಪಿಗಳು ಕೇರಳ ತಂಡಕ್ಕೆ ತಿಳಿಸಿದ್ದು, ಲೂಟಿ ಹೊಡೆಯಲು ಎಲ್ಲಾ ರೀತಿಯ ಸ್ಕೆಚ್ ತಯಾರಿಸಿದ್ದರು.
ಈ ಪ್ರಕರಣದಲ್ಲಿ ಇನ್ನೂ 4-5 ಮಂದಿಯನ್ನು ಬಂಧಿಸಬೇಕಿದ್ದು, 100ರಿಂದ 300 ಕೋಟಿ ಲೂಟಿ ಮಾಡಬಹುದೆಂದು ನಂಬಿಸಿ ಮಾಸ್ಟರ್ ಬೆಡ್‌ರೂಮ್‌ನ ಟೈಲ್ಸ್ ತೆಗೆಯಲು 20ಕ್ಕೂ ಹೆಚ್ಚು ಗೋಣಿ ಚೀಲಗಳು ಮತ್ತು ಸಲಕರಣೆಗಳನ್ನು ತಂದಿದ್ದರು ಎಂದು ಕಮಿಷನರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಲಿಂಗಸುಗೂರು | ಭಕ್ತರ ವೇಷದಲ್ಲಿ ಬಂದು ಮಠದಿಂದ ₹40 ಲಕ್ಷ ಮೌಲ್ಯದ ಸೊತ್ತು ದರೋಡೆಗೈದ ಕಳ್ಳರು!
ಒಂದೇ ಒಂದು ಸುಳಿವೇ ಇಲ್ಲದ ಈ ಪ್ರಕರಣದ ಆರೋಪಿಗಳ ಪತ್ತೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಕಳೆದ 15 ದಿನಗಳಿಂದ ಈ ಪ್ರಕರಣವನ್ನು ಭೇದಿಸಲು ಅವಿರತವಾಗಿ ಶ್ರಮಿಸಿದ ಡಿಸಿಪಿ, ಎಸಿಪಿ ಮತ್ತು ಸಿಸಿಬಿ ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.