ಮಂಗಳೂರು ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಶನಿವಾರ (ಮಾ.2) ನಡೆದ ಕ್ರೀಡಾಕೂಟ ಮಾಮೂಲಿ ಕ್ರೀಡಾಕೂಟಕ್ಕಿಂತ ಭಿನ್ನವಾಗಿತ್ತು. ಇಲ್ಲಿ ಭಾಗವಹಿಸಿದವರು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಸಿಬ್ಬಂದಿ.
ಗ್ರಾಮ ಸ್ವರಾಜ್ ಪ್ರತಿಷ್ಠಾನದ ವತಿಯಿಂದ ಸ್ಥಳೀಯ ಪಂಚಾಯತ್, ನಗರಾಡಳಿತ ಸದಸ್ಯರಿಗಾಗಿ ಹಾಗೂ ಸಿಬ್ಬಂದಿಗಾಗಿ ಆಯೋಜಿಸಲಾದ ಹೊಂಬೆಳಕು ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು, ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರ ಪಾಲಿಕೆಯ ಸದಸ್ಯರು ಪಕ್ಷ ಭೇದ ಮರೆತು ಕ್ರೀಡಾ ಕೂಟದಲ್ಲಿ ಭಾಗಿಯಾದರು. ವಿಧಾನ ಪರಿಷತ್ ಸದಸ್ಯ ಹಾಗೂ ಗ್ರಾಮ ಸ್ವಾರಾಜ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮಂಜುನಾಥ್ ಭಂಡಾರಿ ಅವರ ನೇತೃತ್ವದಲ್ಲಿ ಈ ಹೊಂಬೆಳಕು ಕ್ರೀಡಾಕೂಟ ನಡೆಯಿತು.
ವಾಲಿಬಾಲ್, ತ್ರೋಬಾಲ್, ತೆಂಗಿನಕಾಯಿ ಎಸೆತ, ಗೋಣಿಚೀಲ ಓಟ, ಹಗ್ಗ ಜಗ್ಗಾಟ, ಸೇರಿದಂತೆ ವಿವಿಧ ಆಟ, ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಹಿರಿಯ ಪಂಚಾಯತ್ ಸದಸ್ಯರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರತ್ಯೇಕ ಸಾಂಸ್ಕೃತಿಕ ವೇದಿಕೆಯ ಮೂಲಕ ನಿರಂತರ ಸಾಂಸ್ಕೃತಿಕ ಮನರಂಜನೆಯನ್ನು ಉಣಬಡಿಸಲಾಯಿತು. ವಿವಿಧ ಸ್ಥರಗಳ ಪಂಚಾಯತ್ ಪ್ರತಿನಿಧಿಗಳಿಗೆ ಪರಸ್ಪರ ಪರಿಚಯ, ಒಡನಾಟ ಮೂಡಿಸಲು ಈ ಕ್ರೀಡಾಕೂಟ ಸಹಕಾರಿಯಾಯಿತು ಎಂದು ಭಾಗಿಯಾಗಿದ್ದವರು ಹರ್ಷ ವ್ಯಕ್ತಪಡಿಸಿದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆಲ್ಲ ಅಚ್ಚುಕಟ್ಟಾದ ಊಟೋಪಚಾರದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಎರಡೂ ಜಿಲ್ಲೆಗಳಿಂದ ನಾಲ್ಕು ಸಾವಿರದಷ್ಟು ಮಂದಿ ಕ್ರೀಡಾಕೂಟದಲ್ಲಿ ಭಾಗಿಯಾದರು. ಬಿಸಿಲಿನ ಬೇಗೆಯಲ್ಲೂ ಸ್ಪರ್ಧಾಳುಗಳು ಉತ್ಸಾಹದಿಂದ ಭಾಗವಹಿಸಿದ್ದರು.
