ಮಂಗಳೂರಿನ ಬೆಂಗ್ರೆ ಪ್ರದೇಶಕ್ಕೆ ಸರಕಾರಿ ಬಸ್ ಸಂಚಾರ ವ್ಯವಸ್ಥೆ ಪ್ರಾರಂಭಿಸಲು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ CPIM ಬೆಂಗ್ರೆ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ದ.ಕ.ಜಿಲ್ಲೆಯ ಕಸಬಾ ಬೆಂಗ್ರೆ ಪ್ರದೇಶ ನದಿ ಮತ್ತು ಸಮುದ್ರದ ಮಧ್ಯೆ ಇರುವ ಪ್ರದೇಶವಾಗಿದ್ದು, ಇಲ್ಲಿನ ಜನರು ನಗರ ಪ್ರದೇಶಕ್ಕೆ ತಲುಪಲು ಜಾಸ್ತಿಯಾಗಿ ಫೆರಿಬೋಟ್ ಗಳನ್ನೇ ಅವಲಂಬಿಸಬೇಕಾಗುತ್ತದೆ. ಇನ್ನೊಂದು ಭಾಗದಲ್ಲಿ ರಸ್ತೆಯ ಮುಖಾಂತರ ಕುಳೂರು ಪ್ರದೇಶದವರೆಗೆ ನೇರ ರಸ್ತೆಯಿದ್ದು ಮಂಗಳೂರು ನಗರ ಪ್ರದೇಶಗಳಿಗೆ ಹಾಗೆಯೇ ರಾಷ್ಟ್ರೀಯ ಹೆದ್ದಾರಿಗೂ ತಲುಪಬಹುದಾಗಿದೆ. ಸದ್ಯಕ್ಕೆ ಬೆಂಗ್ರೆಯಿಂದ ಬಜಪೆವರೆಗೆ ಕೇವಲ ಒಂದೇ ಖಾಸಗಿ ಬಸ್, ದಿನಕ್ಕೆರಡು ಬಾರಿ ಮಾತ್ರ ಸಂಚಾರ ಮಾಡುತ್ತದೆ. ಈ ಭಾಗದಿಂದ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಬೇರೆ ಬೇರೆ ವಲಯದ ದುಡಿಯುವ ಜನರಿಗೆ ಸಮಯಕ್ಕೆ ಸರಿಯಾದ ಸೂಕ್ತ ಬಸ್ ವ್ಯವಸ್ಥೆ ಇರುವುದಿಲ್ಲ. ಕೇವಲ ಒಂದು ಖಾಸಗಿ ಬಸ್ಸಿನ ನಿಗದಿತ ಸೇವೆ ಈ ಭಾಗಕ್ಕೆ ಸಾಕಾಗುವುದಿಲ್ಲ. ಹಾಗಾಗಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಸಮಿತಿ ಸದಸ್ಯರು ಮನವಿ ಮಾಡಿದರು.
“ಈ ನಿಟ್ಟಿನಲ್ಲಿ ಪ್ರಸ್ತುತ ತೋಟ ಬೆಂಗ್ರೆಯಿಂದ ಕಸಬಾ ಬೆಂಗ್ರೆ ಮಾರ್ಗವಾಗಿ ತನ್ನೀರುಬಾವಿ, ಕುಳೂರು, ಕೊಟ್ಟಾರ, ಲಾಲ್ ಭಾಗ್ ಕೊಟ್ಟಾರ, ಕಾರ್ಪೊರೇಷನ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ, ಮಂಗಳೂರು ರೈಲ್ವೆ ನಿಲ್ದಾಣ ಜಂಕ್ಷನ್ ವರೆಗೆ ಚಲಿಸಲು ಸರಕಾರಿ ಬಸ್ ವ್ಯವಸ್ಥೆ ಅಗತ್ಯವಿದೆ ಮತ್ತು ಈ ಭಾಗದಿಂದ ಬೇರೆ ಬೇರೆ ಪ್ರದೇಶಗಳಿಗೂ ಸಂಚರಿಸಲು ಸರಕಾರಿ ಬಸ್ ಅಗತ್ಯವಿದೆ. ವಿಶೇಷವಾಗಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಸರಕಾರದ ಉಚಿತ ಪ್ರಯಾಣದ ಸೌಲಭ್ಯ ದೊರೆಯಬೇಕು” ಎಂದು CPIM ಬೆಂಗ್ರೆ ನಿಯೋಗ ಆಗ್ರಹಿಸಿದೆ.
ಇದನ್ನೂ ಓದಿ: ಮಂಗಳೂರು | ಮಾದಕ ದ್ರವ್ಯ ಸೇವನೆ; ಮೂವರ ಬಂಧನ
ನಿಯೋಗದಲ್ಲಿ CPIM ಮಂಗಳೂರು ದಕ್ಷಿಣ ನಗರ ಸಮಿತಿ ಸದಸ್ಯ ತೈಯೂಬ್ ಬೆಂಗ್ರೆ, CPIM ಬೆಂಗ್ರೆ ಕಾರ್ಯದರ್ಶಿ ನಾಸಿರ್ ಬಾಸ್, ಬಿಲಾಲ್ ಬೆಂಗ್ರೆ, ಮುಖಂಡರಾದ ಹನೀಫ್ ಬೆಂಗ್ರೆ, ಮುಹಾಝ್, ರಿಝ್ವಾನ್ ಹಾಗೂ ಫಝುಲ್ ಉಪಸ್ಥಿತರಿದ್ದರು.