ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ನಡೆದ ಅಪಘಾತದ ವೇಳೆ ಸಮಯಪ್ರಜ್ಞೆ ಮೆರೆದು ಕೂಡಲೇ ತಾಯಿಯನ್ನು ರಕ್ಷಿಸಿದ್ದ ವಿದ್ಯಾರ್ಥಿನಿ ವೈಭವಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
ತನ್ನ ತಾಯಿ ರಿಕ್ಷಾದಡಿಗೆ ಬಿದ್ದುದನ್ನು ಕಂಡ ವೈಭವಿ ತಕ್ಷಣ ರಿಕ್ಷಾವನ್ನು ಮೇಲಕ್ಕೆತ್ತುವ ಮೂಲಕ ತಾಯಿಯನ್ನು ರಕ್ಷಿಸಿದ್ದಳು. ಇದರ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು.
ಅಲ್ಲದೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಟ್ವೀಟ್ ಮಾಡಿ, ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. 7ನೇ ತರಗತಿಯ ವಿದ್ಯಾರ್ಥಿನಿಯಾಗಿರುವ ವೈಭವಿಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ತಮ್ಮ ಕಚೇರಿಗೆ ಕರೆಯಿಸಿ ಪೇಟ, ಹಾರ ತೊಡಿಸಿ ಸನ್ಮಾನಿಸಿದರಲ್ಲದೆ, ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.
ಇದನ್ನು ಓದಿದ್ದೀರಾ? ಮಂಡ್ಯ | ಡೆತ್‌ನೋಟ್ ಬರೆದು ಮನೆಬಿಟ್ಟಿದ್ದ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಪತ್ತೆ
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿಯ ಪಾಲಕರು ಉಪಸ್ಥಿತರಿದ್ದರು.
ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೆ ಸಂದೇಶ ರವಾನಿಸಿದೆ: ಸಿಎಂ ಸಿದ್ದರಾಮಯ್ಯ
ವಿದ್ಯಾರ್ಥಿನಿ ವೈಭವಿಯ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ” ಎಂದು ತಿಳಿಸಿದ್ದರು.
ತಮ್ಮ ಟ್ವೀಟ್‌ನಲ್ಲಿ, “ಇತ್ತೀಚಿನ ದಿನಗಳಲ್ಲಿ ಅಪಘಾತ ಸಂಭವಿಸಿದ ಸ್ಥಳಗಳಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಜನರು ಸುತ್ತಲೂ ನಿಂತು ಮೊಬೈಲ್ ಮೂಲಕ ವೀಡಿಯೋ ಮಾಡುವುದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ಕಂಡಿದ್ದೆ. ಇದು ಭವಿಷ್ಯದ ದಿನಗಳ ಬಗ್ಗೆ ನನ್ನಲ್ಲಿ ಆತಂಕವನ್ನೂ ಮೂಡಿಸಿತ್ತು. ಈ ಪುಟ್ಟ ಬಾಲಕಿಯ ಕಾರ್ಯ ಇಡೀ ಸಮಾಜಕ್ಕೊಂದು ಸಂದೇಶ ರವಾನಿಸಿದಂತಿದೆ. ಅಪಘಾತ, ಬೆಂಕಿ ಅನಾಹುತ, ಹೃದಯಾಘಾತದಂತಹ ತುರ್ತು ಸಂದರ್ಭದಲ್ಲಿ ಸಂತ್ರಸ್ತರ ಪಾಲಿಗೆ ಪ್ರತಿ ಸೆಕೆಂಡ್ ಕೂಡ ಅಮೂಲ್ಯ. ಈ ವೇಳೆ ಮಾನವೀಯತೆ ಮರೆಯದಿರಿ” ಎಂದು ಸಿಎಂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು.
