ಕರಾವಳಿ ಜಿಲ್ಲೆ ಮಂಗಳೂರು ಭಾಗದಲ್ಲಿ ತಲ್ಲಣ ಸೃಷ್ಟಿಸಿದ್ದ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿದ್ದ ಪ್ರಕರಣ ಕೊನೆಗೂ ಆತ ಉಡುಪಿಯಲ್ಲಿ ಪತ್ತೆಯಾಗುವ ಮೂಲಕ ತಾರ್ಕಿಕ ಅಂತ್ಯ ಕಂಡಿದೆ.
ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಮಾ.8ರ ಶನಿವಾರ ಕೊನೆಗೂ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಇದೀಗ ಆತನ ನಾಪತ್ತೆಯ ಬಳಿಕ ಉಂಟಾಗಿದ್ದ ಹಲವು ಊಹಾಪೋಹಗಳು ಒಂದೊಂದಾಗಿ ಹೊರಗೆ ಬರುತ್ತಿದ್ದು, ಪೊಲೀಸರ ತನಿಖೆಯ ವೇಳೆ ಒಂದೊಂದು ಅಂಶಗಳು ಹೊರಗೆ ಬರುತ್ತಿರುವುದಾಗಿ ವರದಿಯಾಗಿದೆ.
ಪೊಲೀಸರ ತೀವ್ರ ವಿಚಾರಣೆಯ ವೇಳೆ ನಾಪತ್ತೆಯಾಗಿದ್ದ ದಿಗಂತ್ ಒಂದೊಂದೇ ಅಂಶಗಳನ್ನು ಬಾಯಿಬಿಟ್ಟಿದ್ದು, ‘ತಾನು ಉಡುಪಿಯಲ್ಲಿ ಪತ್ತೆಯಾಗುವುದಕ್ಕೂ ಮುನ್ನ ತನ್ನ ಮನೆಯ ಮುಂದೆಯೇ ರೈಲಿನಲ್ಲಿ ಪ್ರಯಾಣ ಮಾಡಿದ್ದೆ. ಮನೆಯ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಸಾರ್ವಜನಿಕರು ನೆರೆದಿದ್ದನ್ನು ಕಂಡಿದ್ದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ದಿಗಂತ್ ನಿಗೂಢವಾಗಿ ನಾಪತ್ತೆಯಾಗುವ ಮೂಲಕ ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿತ್ತು. ಅಲ್ಲದೇ, ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಕೂಡ ಸ್ಪೀಕರ್ ಯು.ಟಿ. ಖಾದರ್ ಅವರೇ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರನ್ನು ಪ್ರಶ್ನಿಸಿದ್ದರು.

ಇದೀಗ, ಪತ್ತೆಯಾದ ಬಳಿಕ ಪೊಲೀಸರ ವಿಚಾರಣೆಯ ಸಮಯದಲ್ಲಿ ವಿದ್ಯಾರ್ಥಿ ದಿಗಂತ್ ಪರೀಕ್ಷೆಗೆ ಹೆದರಿದ್ದ ಎಂಬ ಮಾತುಗಳು ಕೇಳಿ ಬರುತ್ತಿದೆ.
ನಗರದ ಕಪಿತಾನಿಯೋದ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ದಿಗಂತ್ ಪರೀಕ್ಷೆಗೆ ಹೆದರಿದ್ದ ಎನ್ನಲಾಗಿದೆ. ಉಡುಪಿಯ ಡಿ ಮಾರ್ಟ್ ಸಿಬ್ಬಂದಿಗೆ ಸಿಕ್ಕ ಬಳಿಕ ಶನಿವಾರ ಸಂಜೆ ತನ್ನ ತಾಯಿಗೆ ಫೋನ್ ಕರೆ ಮಾಡಿ ನಾನು ಉಡುಪಿಯಲ್ಲಿದ್ದೇನೆ. ನಾನೇನು ಓಡಿ ಹೋಗೋ ಹುಡುಗ ಅಲ್ಲ, ನನ್ನನ್ನು ಯಾರೋ ಹೊತ್ತುಕೊಂಡು ಹೋಗಿದ್ದಾರೆ. ಎಲ್ಲವನ್ನೂ ನಾನು ಬಂದು ಹೇಳೇನೆ ಎನ್ನುತ್ತಾ ಕರೆ ಕಡಿತಗೊಳಿಸಿದ್ದ.
ಆ ಬಳಿಕ ಪೊಲೀಸರು ದಿಗಂತ್‌ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಪರೀಕ್ಷೆಗೆ ಹೆದರಿ ಊರು ಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದನಲ್ಲದೆ ಕಳೆದ 12 ದಿನದಿಂದ ತಾನು ಎಲ್ಲೆಲ್ಲಿಗೆ ಹೋಗಿದ್ದೆ ಎಂಬುದನ್ನು ವಿವರಿಸಿರುವುದಾಗಿ ತಿಳಿದು ಬಂದಿದೆ.
ಫೆ.25ರಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದ ದಿಗಂತ್ ತನ್ನ ಚಪ್ಪಲಿಯನ್ನು ರೈಲ್ವೆ ಹಳಿಯ ಬಳಿ ಕಳಚಿಟ್ಟಿದ್ದ. ಅಲ್ಲದೇ, ಮೂರು ಹನಿ ರಕ್ತವನ್ನು ಅದರ ಮೇಲೆ ಸುರಿದಿದ್ದ ಎಂಬ ಅಂಶ ಕೂಡ ಹೊರಗೆ ಬಂದಿದೆ. ಅಲ್ಲದೇ, ತನ್ನ ಸ್ನೇಹಿತನಿಂದ ಮೊದಲೇ ಪಡೆದಿದ್ದ ಶೂವನ್ನು ಧರಿಸಿ ಫರಂಗಿಪೆಟೆಯಿಂದ ಅರ್ಕುಳದವರೆಗೆ ರೈಲ್ವೆ ಹಳಿಯಲ್ಲೇ ನಡೆದುಕೊಂಡು ಹೋಗಿದ್ದ. ಬಳಿಕ ಅದೇ ದಾರಿಯಾಗಿ ಬಂದ ಬೈಕೊಂದಕ್ಕೆ ಏರಿದ್ದ ಎಂದು ತಿಳಿದು ಬಂದಿದೆ.

ಆನಂತರ ಬಸ್ಸಿನಲ್ಲಿ ಶಿವಮೊಗ್ಗ ಮತ್ತು ಅಲ್ಲಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ. ಮೈಸೂರಿನಿಂದ ಕೆಂಗೇರಿಗೆ ತೆರಳಿದ್ದ. ನಂತರ ಪ್ರವಾಸಿ ತಾಣವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಹಿಲ್ಸ್‌ಗೆ ಹೋಗಿದ್ದ. ಅಲ್ಲಿ ಎರಡು ದಿನ ಏನೋ ಕೆಲಸ ಮಾಡಿ ಬಳಿಕ ಮೈಸೂರಿಗೆ ಬಂದಿದ್ದ. ಅಲ್ಲಿಂದ ಉಡುಪಿಗೆ ಶನಿವಾರ ಬೆಳಗ್ಗೆ ಹೋಗಿದ್ದ ಎನ್ನಲಾಗಿದೆ.
ಹೀಗೆ ರೈಲಿನಲ್ಲಿ ಉಡುಪಿ ಕಡೆಗೆ ಹೋಗುವಾಗ ಫರಂಗಿಪೇಟೆಯ ತನ್ನ ಮನೆಯ ಸುತ್ತಮುತ್ತ ಪೊಲೀಸರ ಸಹಿತ ಸಾರ್ವಜನಿಕರು ಇರುವುದನ್ನೂ ಕೂಡ ದಿಗಂತ್ ಗಮನಿಸಿದ್ದಾನೆ ಎಂದು ಆತ ಪೊಲೀಸರ ತನಿಖೆಯ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಅಪರಾಹ್ನದ ವೇಳೆಗೆ ವಿಪರೀತ ಹಸಿವಾದ ಕಾರಣ ಉಡುಪಿಯ ಡಿಮಾರ್ಟ್‌ಗೆ ತೆರಳಿ ಅಲ್ಲಿಂದ ಬಿಸ್ಕೆಟ್ ಖರೀದಿಸಿ ಹೊರಬರುವಾಗ ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿರುವುದಾಗಿ ತಿಳಿದು ಬಂದಿದೆ.

ದಿಗಂತ್ ಪತ್ತೆಗಾಗಿ ಮನೆಮಂದಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಕಾರಣ ಪೊಲೀಸರು ಆತನನ್ನು ಹೈಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಪತ್ತೆ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ್ದ ಬಿಜೆಪಿ-ಸಂಘಪರಿವಾರ!
ದಿಗಂತ್ ನಾಪತ್ತೆಯಾದ ಬಳಿಕ ಈ ಪ್ರಕರಣಕ್ಕೆ ಬಿಜೆಪಿ ಹಾಗೂ ಸಂಘಪರಿವಾರವು ಕೋಮು ಬಣ್ಣ ಬಳಿಯಲು ಮುಂದಾಗಿತ್ತು.
ಫರಂಗಿಪೇಟೆ ಪ್ರದೇಶದಲ್ಲಿ ಮುಸ್ಲಿಮ್ ಸಮುದಾಯದ ಮಂದಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಹಾಗಾಗಿ, ಈ ಪ್ರಕರಣಕ್ಕೆ ಕೋಮು ಆಯಾಮ ನೀಡಲು ಪ್ರಯತ್ನಿಸಿತ್ತು.

‘ದಿಗಂತ್ ನಾಪತ್ತೆಯಾಗಿರುವ ಪ್ರದೇಶದಲ್ಲಿ ಒಂದು ಕೋಮು ಮಾದಕ ದ್ರವ್ಯ ಜಾಲವನ್ನು ನಡೆಸುತ್ತಿದೆ. ಅವರಿಂದಲೇ ಕಿಡ್ನ್ಯಾಪ್ ಆಗಿರಬಹುದು’ ಎಂದು ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೊರಿಸಲು ಯತ್ನಿಸಿತ್ತು. ಆದರೆ, ಈ ಪ್ರಯತ್ನಕ್ಕೆ ಸೊಪ್ಪು ಹಾಕದ ಫರಂಗಿಪೇಟೆಯ ಮಸೀದಿ ಹಾಗೂ ಆ ಭಾಗದ ಮುಸ್ಲಿಮರು ದಿಗಂತ್ ಪತ್ತೆಗೆ ಬಹಿರಂಗವಾಗಿಯೇ ಸಹಕಾರ ನೀಡಿದ್ದರು. ಅಲ್ಲದೇ, ವಿಶ್ವ ಹಿಂದೂ ಪರಿಷತ್ ನಡೆಸಿದ್ದ ಪ್ರತಿಭಟನೆಯ ದಿನ ಫರಂಗಿಪೇಟೆಯ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ, ಸಹಕಾರ ನೀಡಿದ್ದರು. ಇದು ಸಂಘಪರಿವಾರದ ಹಿನ್ನಡೆಗೆ ಕಾರಣವಾಗಿತ್ತು.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ, “
ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಈ ಹದಿಹರೆಯದ ವಿದ್ಯಾರ್ಥಿಯನ್ನು “ಅನ್ಯಮತೀಯರು” ಅಪಹರಿಸಿದ್ದಾರೆ, ಕೊಂದೇ ಬಿಟ್ಟಿದ್ದಾರೆ ಎಂಬಂತೆ ಹುಯಿಲೆಬ್ಬಿಸಲಾಗಿತ್ತು. ಫರಂಗಿಪೇಟೆಯನ್ನು ಬಂದ್ ಮಾಡಿ, ಕೇಸರಿ ಶಾಲು ಧರಿಸಿ “ಹಿಂದುತ್ವ ಸಂಘಟನೆಗಳ ಬ್ಯಾನರ್ ಅಡಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲೆಯ ಬಹುತೇಕ ಬಿಜೆಪಿ ಶಾಸಕರು ಅಲ್ಲಿ ಹಾಜರಿದ್ದರು. ಒಂದು ಧರ್ಮವನ್ನು ಗುರಿಯಾಗಿಸಿ ಭಾಷಣ, ಹೇಳಿಕೆಗಳು ಹೊರಟಿದ್ದವು. ಓರ್ವ ಶಾಸಕರು “ಬಹು ಸಂಖ್ಯಾತರು ಇಲ್ಲಿ ಭಯದಿಂದ ಬದುಕುವ ಸ್ಥಿತಿ ನಿರ್ಮಾಣ ಆಗಿದೆ” ಎಂದು ಕಿಡಿಕಾರಿದ್ದರು. ಈಗ ದಿಗಂತ್ ಪತ್ತೆಯಾಗಿದ್ದಾನೆ” ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಯತೀಶ್, ಐಜಿಪಿ ಅಮಿತ್ ಸಿಂಗ್ ಆಹೋರಾತ್ರಿ ಶ್ರಮಿಸಿ, ಇಡೀ ಪೊಲೀಸ್ ಇಲಾಖೆಯನ್ನು ತನಿಖೆಯಲ್ಲಿ ತೊಡಗಿಸಿ ದಿಗಂತ್ ನನ್ನು ಪತ್ತೆ ಹಚ್ಚಿದ್ದಾರೆ. ಅಲ್ಪಸಂಖ್ಯಾತರು ಸಹಿತ ನಾಗರಿಕರು ಸಮಾಧಾನದಿಂದ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ ಅವರಿಗೆ ನಾಡು ಅಭಾರಿಯಾಗಿದೆ. ಧರ್ಮದ ಬಣ್ಣ ಹಚ್ಚಿ ಪ್ರತಿಭಟನೆ ಆಯೋಜಿಸಿದ, ನಾಗರಿಕ ಸಮಾಜವನ್ನು ಆತಂಕಕ್ಕೆ ತಳ್ಳಿದ ಸಂಘಪರಿವಾರದ ಸಂಘಟನೆಗಳು, ಬಿಜೆಪಿ ಶಾಸಕರುಗಳು ಈಗ ಮತ್ತೆ ರಂಗಕ್ಕೆ ಬರಬೇಕು. ದಿಗಂತ್ ಅಪಹರಣದಲ್ಲಿ “ಅನ್ಯ” ಮತೀಯರ (ಮಸ್ಲಿಮರ) ಪಾತ್ರ ಏನೇನು ಎಂಬುದನ್ನು ಆಧಾರ ಸಹಿತ ಸವಿವರವಾಗಿ ವಿವರಿಸಬೇಕು. ಈ ಕುರಿತು ಮಾಹಿತಿ, ಸ್ಪಷ್ಟೀಕರಣ ಕೇಳುವ ಹಕ್ಕು ನಾಗರಿಕರಿಗೆ ಇದೆ” ಎಂದು ತಿಳಿಸಿದ್ದಾರೆ.

“ದಿಗಂತ್ ಜೀವಂತವಾಗಿ ಪತ್ತೆ ಆಗಿರುವುದರಿಂದ ಸಂತೋಷ ಆಗಿದೆ” ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ ಅವರ ಮುಖ ಮಾತ್ರ ತೀವ್ರ ನಿರಾಸೆ ಆಗಿರುವುದನ್ನು ಎತ್ತಿ ತೋರಿಸುತ್ತಿತ್ತು. ದಿಗಂತ್ ಪತ್ತೆಯಾಗಿರುವುದರಿಂದ ಪೊಲೀಸ್ ಇಲಾಖೆಗೆ ಸಮಾಧಾನ, ದಿಗಂತ್ ಹೆತ್ತವರಿಗೆ ಸಂತೋಷ, ಬಿಜೆಪಿ, ಪರಿವಾರಕ್ಕೆ ಅತೀವ ನಿರಾಸೆ ಆಗಿರುವುದು ಸತ್ಯ” ಎಂದು ಮುನೀರ್ ಕಾಟಿಪಳ್ಳ ಟಾಂಗ್ ನೀಡಿದ್ದಾರೆ.
