ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಕುಡುಪು ಎಂಬಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾದ ಘಟನೆ ತಿರುವು ಪಡೆದುಕೊಂಡಿದ್ದು, ಗುಂಪಿನಿಂದ ಹಲ್ಲೆಗೊಳಗಾಗಿ ಹತ್ಯೆಯಾಗಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿರುವುದಾಗಿ ಈದಿನ ಡಾಟ್ ಕಾಮ್‌ಗೆ ತಿಳಿದು ಬಂದಿದೆ.
ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಗುಂಪು ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಸುಮಾರು 15 ಮಂದಿ ಆರೋಪಿಗಳನ್ನು ತಡರಾತ್ರಿ ಬಂಧಿಸಿರುವುದಾಗಿ ವರದಿಯಾಗಿದೆ. ಆದರೆ, ಈ ಬಗ್ಗೆ ಇನ್ನೂ ಕೂಡ ಮಂಗಳೂರು ನಗರ ಪೊಲೀಸರು ಅಧಿಕೃತ ಮಾಹಿತಿ ನೀಡಿಲ್ಲ. ವಶಕ್ಕೆ ತೆಗೆದುಕೊಂಡ ಆರೋಪಿಗಳಿಂದ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದು ಬಂದಿದೆ. ಅಲ್ಲದೇ, ‘ಮುಸ್ಲಿಂ’ ಎಂಬ ಕಾರಣಕ್ಕಾಗಿಯೇ ವಲಸೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿ, ಹತ್ಯೆಗೈದಿರುವುದಾಗಿ ಪೊಲೀಸರ ತನಿಖೆಯ ವೇಳೆ ಖಚಿತವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಹೆಚ್ಚು ಮಾಹಿತಿ ನೀಡಲು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿರುವುದಾಗಿ ಈದಿನ ಡಾಟ್ ಕಾಮ್‌ಗೆ ತಿಳಿದು ಬಂದಿದೆ.
ಈ ಘಟನೆಯ ಬಗ್ಗೆ ಈದಿನ ಡಾಟ್ ಕಾಮ್ ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದಾಗ, “ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ನೀಡಲಿದ್ದೇವೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಮಗ್ರ ತನಿಖೆಗೆ ಸಮಾನ ಮನಸ್ಕ ಮುಖಂಡರ ಆಗ್ರಹ
ಘಟನೆಯ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯಬೇಕು ಎಂದು ಮಂಗಳೂರಿನ ಸಮಾನ ಮನಸ್ಕ ಮುಖಂಡರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡರಾದ ಶಾಹುಲ್ ಹಮೀದ್ ಕೆ.ಕೆ, ಡಿವೈಎಫ್‌ಐ ಮುಖಂಡರಾದ ಇಮ್ತಿಯಾಝ್, ಸಂತೋಷ್ ಕುಮಾರ್ ಬಜಾಲ್, ಎಸ್‌ಡಿಪಿಐ ಮುಖಂಡರಾದ ಜಲೀಲ್ ಕೃಷ್ಣಾಪುರ, ಅನ್ವರ್ ಸಾದಾತ್ ಬಜತ್ತೂರು ಆಗ್ರಹಿಸಿದ್ದಾರೆ.

ಏನಿದು ಘಟನೆ?
ಕರಾವಳಿ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದಲ್ಲಿ ಮುಸ್ಲಿಂ ವಲಸೆ ಕಾರ್ಮಿಕನೋರ್ವನನ್ನು ಸುಮಾರು 50 ಜನರ ಗುಂಪೊಂದು ಹಲ್ಲೆ ನಡೆಸಿ, ಹತ್ಯೆಗೈದಿರುವ ಆರೋಪವೊಂದು ಕೇಳಿಬಂದಿತ್ತು.
ನಗರದ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಇದೀಗ ಪ್ರಕರಣವು ತಿರುವು ಪಡೆದಿದ್ದು, ‘ಮುಸ್ಲಿಂ’ ಎಂಬ ಕಾರಣಕ್ಕೆ ಯುವಕನನ್ನು ಗುಂಪು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದವು.

ಮೃತ ಯುವಕ ಉತ್ತರ ಭಾರತ ಮೂಲದವನು ಎನ್ನಲಾಗಿದ್ದು, ಹೆಸರು, ವಿವರ ಇನ್ನೂ ಪತ್ತೆಯಾಗಿಲ್ಲ. ಸುಮಾರು 35ರಿಂದ 40 ವರ್ಷ ಪ್ರಾಯದ ಈ ಯುವಕನನ್ನು 50 ಮಂದಿಯ ಗುಂಪು ಬ್ಯಾಟ್, ದೊಣ್ಣೆಯಿಂದ ಹಲ್ಲೆ ಮಾಡಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. 50 ಜನರ ಗುಂಪಿನಲ್ಲಿ ಮಾಜಿ ಕಾರ್ಪೊರೇಟರ್ ಒಬ್ಬರ ಪತಿಯೂ ಭಾಗಿಯಾಗಿದ್ದರು ಎಂಬ ಮಾತುಗಳು ಕೇಳಿಬಂದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಕಾಂಗ್ರೆಸ್ ಮತ್ತು ಸಿಪಿಎಂ ಆಗ್ರಹಿಸಿತ್ತು.
ಸದ್ಯ ಮೃತದೇಹವು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದು, ಯಾರೂ ವಾರೀಸುದಾರರು ಬಂದಿಲ್ಲದೇ ಇರುವುದರಿಂದ ಮರಣೋತ್ತರ ಪರೀಕ್ಷೆ ಕೂಡ ನಡೆಸಿಲ್ಲ ಎಂದು ತಿಳಿದುಬಂದಿದೆ.
