- ‘ಕೇರಳ ಸ್ಟೋರಿ’ ನೋಡಿಯೂ ನಿಮಗೆ ಬುದ್ಧಿ ಬರುವುದಿಲ್ವ ಎಂದು ಹೇಳಿ ಹಲ್ಲೆ
- ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಯುವತಿಯರು
ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿ ಅನೈತಿಕ ಪೊಲೀಸ್‌ಗಿರಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಕಾರ್ಯ ಪ್ರವೃತ್ತರಾದ ಮಂಗಳೂರು ಪೊಲೀಸರು, ಇಬ್ಬರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
ಬಂಧಿತರನ್ನು ದೀಕ್ಷಿತ್(32) ಮತ್ತು ಲಾಯ್ಡ್ ಪಿಂಟೋ(32) ಎಂದು ಗುರುತಿಸಲಾಗಿದೆ.
ಮಂಗಳೂರಿನ ಬ್ಯಾಚುಲರ್ ಆಫ್ ಹಾಸ್ಪಿಟಲ್ ಆ್ಯಡ್ಮೀಸ್ಟ್ರೇಷನ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪಣಂಬೂರು ಬೀಚ್‌ಗೆ ತೆರಳಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ವೀಕ್ಷಿಸುತ್ತಿದ್ದ ಈ ಇಬ್ಬರು ಆರೋಪಿಗಳು, ತಮ್ಮ ಮೊಬೈಲ್‌ನಲ್ಲಿ ವಿದ್ಯಾರ್ಥಿಗಳ ಚಲನವಲನಗಳನ್ನು ಚಿತ್ರೀಕರಿಸಿದ್ದರು. ಆದರೆ ಇದನ್ನು ಗಮನಿಸಿದ್ದರೂ ಕೂಡ ವಿದ್ಯಾರ್ಥಿಗಳ ಗುಂಪಿನ ಯುವಕರು, ತಮ್ಮಪಾಡಿಗೆ ಇದ್ದರು. ಬಳಿಕ ಯುವಕರು ಬೈಕ್‌ನಲ್ಲಿ ವಾಪಸ್ ಹೋಗಿದ್ದರೆ, ವಿದ್ಯಾರ್ಥಿನಿಯರು ಬಸ್ ನಲ್ಲಿ ತೆರಳಿದ್ದರು.
ವಿದ್ಯಾರ್ಥಿನಿಯರ ಪೈಕಿ ಕ್ರಿಶ್ಚಿಯನ್ ಸಮುದಾಯದ ಯುವತಿ ನಗರದ ಚಿಲಿಂಬಿಯಲ್ಲಿ ಬಸ್‌ನಿಂದ ಇಳಿದು ತನ್ನ ಪಿಜಿ ಕಡೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದು, ಯುವತಿಯ ಮೈಮೇಲೆ ಕೈಹಾಕಿ ಬೆದರಿಸಿದ್ದು, ‘ಕೇರಳ ಸ್ಟೋರಿ’ ಸಿನಿಮಾ ನೋಡಿಯೂ ನಿಮಗೆ ಬುದ್ಧಿ ಬರುವುದಿಲ್ವಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿದೆ.
ನಗರದ ಬಿಜೈ ಕಾಪಿಕಾಡ್ ನ 7ನೇ ಕ್ರಾಸ್‌ನಲ್ಲಿ ತಡೆದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಲಾಗಿತ್ತು. ಬಳಿಕ ಈ ಘಟನೆಗೆ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯರು ಪ್ರಕರಣ ದಾಖಲಿಸಿದ್ದರು.
ಆರೋಪಿಗಳನ್ನು ದಸ್ತಗಿರಿ ಮಾಡಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಯ ಬಳಿಕವೂ ಮುಂದುವರಿದ ಅನೈತಿಕ ಪೊಲೀಸ್‌ಗಿರಿ ಮುಂದುವರಿದಿದ್ದು, ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆರೋಪಿಗಳ ಬಂಧನವಾಗಿದೆ.