“ಮಂಗಳೂರಿನ ಖ್ಯಾತ ಉದ್ಯಮಿ ಮುಮ್ತಾಝ್ ಅಲಿಯವರ ಸಾವಿಗೆ ಕಾರಣನಾದವರು ನಾಗರಿಕ ಸಮಾಜದಲ್ಲಿ ಬದುಕಲು ಯೋಗ್ಯರಾದವರಲ್ಲ. ನಾವು ಅಂಥವರನ್ನು ಕಾನೂನು ಕ್ರಮದಿಂದ ಸರಿಸಿಬಿಟ್ಟರೆ ನಾಳೆ ಇನ್ನಷ್ಟು ಮಂದಿ ಸೇತುವೆಯಿಂದ ಹಾರುವ ಸನ್ನಿವೇಶ ಬರಬಹುದು” ಎಂದು ಕೆಪಿಸಿಸಿ ವಕ್ತಾರೆ ಪ್ರತಿಭಾ ಕುಳಾಯಿ ಹೇಳಿದರು.
ಮಂಗಳೂರಿನ ಸುರತ್ಕಲ್ ಜಂಕ್ಷನ್‌ನಲ್ಲಿ ಮುಮ್ತಾಝ್ ಅಲಿ ಅಭಿಮಾನಿ ಬಳಗದಿಂದ ಗುರುವಾರ ನಡೆದ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
“ಇಂಥ ಕೃತ್ಯ ನಡೆಸುವವರನ್ನು ಕಾನೂನಾತ್ಮಕವಾಗಿ ಬಗ್ಗುಬಡಿದರೆ ಮಾತ್ರ ಜೀವ ಕಾಪಾಡಿಕೊಳ್ಳಬಹುದು. ಇಲ್ಲದೆ ಇದ್ದರೆ ಇಂಥ ದ್ರೋಹಿಗಳ ಕುತಂತ್ರಕ್ಕೆ ಬಲಿಯಾಗಬೇಕಾದೀತು” ಎಂದರು.

“ಆರೋಪಿ ಸತ್ತಾರ್ ನನಗೆ ಕೊಟ್ಟಿರುವ ಹಿಂಸೆ ಇನ್ಯಾರಿಗೂ ಕೊಡುವುದು ಬೇಡ. ನಾನೊಬ್ಬ ಹಿಂದೂ ಮಹಿಳೆಯಾಗಿದ್ದಕ್ಕೆ ಆತನನ್ನು ಎದುರಿಸಿ ಇನ್ನೂ ಗಂಡ ಮಕ್ಕಳ ಜೊತೆಗೆ ಬದುಕಿದ್ದೇನೆ. ಆತ ನನ್ನಿಂದ ಪೆಟ್ಟು ತಿಂದ ಮೇಲೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ನನ್ನ ಹಿಂದೆ ಬಂದು ನಿಂತು ಫೋಟೋ ತೆಗೆಸಿ ಹಾಕುತ್ತಿದ್ದ. ಆತನಿಗೆ 5 ತಿಂಗಳ ಹಿಂದೆ ನಾನೇ ಎಚ್ಚರಿಕೆ ಕೊಟ್ಟಿದ್ದೇನೆ. ಇನ್ನೊಮ್ಮೆ ನನ್ನ ಹಿಂದೆ ಫೋಟೋದಲ್ಲಿ ಕಾಣಿಸಿಕೊಂಡರೆ ನಿನ್ನ ಕೈ ಕಡಿಯುವುದಲ್ಲ ಕತ್ತು ಕಡಿಯುವುದಾಗಿ ಹೇಳಿದ್ದೆ. ಅವತ್ತು ಹಿಂದೂ ಹೆಣ್ಣುಮಕ್ಕಳ ವಿಚಾರದಲ್ಲಿ ಆತನ ಕೈ ಕಡಿಯುವ ಬದಲು ತಲೆ ಕಡಿದಿದ್ದರೆ ಇಂದು ಮುಮ್ತಾಝ್ ಅಲಿಯಂತಹವರು ಸಾಯುತ್ತಿರಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಿಸ್ಬಾ ಮಹಿಳಾ ಕಾಲೇಜ್ ಟ್ರಸ್ಟ್ ಕಾರ್ಯದರ್ಶಿ ಅಬ್ದುಲ್ ರಫೀಕ್ ಜೈನಿ ಕಾಮಿಲ್ ಸಖಾಫಿ ಮಾತನಾಡಿ, ನಾಗರಿಕ ಸಮಾಜಕ್ಕೆ ಕಳಂಕವಾಗಿರುವ ಹನಿ ಟ್ರ್ಯಾಪ್‌ನಂಥ ಕೃತ್ಯವನ್ನು ಮಾಡಿರುವ ತಂಡವನ್ನು ಮಟ್ಟ ಹಾಕಬೇಕು ಎಂದರು.
ಎಸ್‌ಡಿಪಿಐ ಮುಖಂಡ ರಿಯಾಜ್ ಫರಂಗಿಪೇಟೆ ಮಾತನಾಡಿ, ಉದ್ಯಮಿ ಮುಮ್ತಾಝ್ ಅಲಿ ಸಾವಿಗೆ ಕಾರಣರಾದವರನ್ನು ಜಮಾತ್, ಸಾಮಾಜಿಕ ಸಂಘಟನೆಗಳಿಂದ ದೂರವಿಡಬೇಕು ಎಂದು ಹೇಳಿದರು.

“ತನ್ನ ಜೊತೆ ಇದ್ದವರು ಊಟ ಹಾಕಿದವರನ್ನೇ ಇಂದು ಕೊಲ್ಲುತ್ತಾರೆ ಎಂದರೆ ನಮ್ಮ ಸಮಾಜದಲ್ಲಿ ಇನ್ನೂ ಅಂತವರು ಇದ್ದಾರೆ. ಅವರನ್ನು ನಮ್ಮ ಜಮಾತ್ ನಲ್ಲಿಟ್ಟು ಬೆಳೆಸುತ್ತಿರುವುದು ಅವರನ್ನು ಗುರುತಿಸುವಲ್ಲಿ ವಿಫಲರಾಗಿರುವುದು ನಮ್ಮ ದೊಡ್ಡ ತಪ್ಪು. ನಮ್ಮ ಮಸೀದಿ, ಸಾಮಾಜಿಕ ಸಂಘಟನೆಗಳಿಂದ ಅಂತವರನ್ನು ದೂರವಿಡಬೇಕು. ಮುಂದೆ ಇನ್ನಷ್ಟು ಮಂದಿ ಮೋಸದ ಜಾಲಕ್ಕೆ ಬಲಿಯಾಗಬಾರದು. ಆ ಜವಾಬ್ದಾರಿಯನ್ನು ನಾವು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದರು.
ಎಸಿಪಿ ಶ್ರೀಕಾಂತ್ ಮೂಲಕ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಮಿಸ್ಬಾ ಕಾಲೇಜು ಪ್ರಾಂಶುಪಾಲೆ ಝಯಿದ ಜಲೀಲ್, ಕಾರ್ಪೊರೇಟರ್ ಸಂಶಾದ್ ಅಬೂಬಕರ್, ಹ್ಯಾರಿಸ್ ಬೈಕಂಪಾಡಿ ಭಾಗವಹಿಸಿದ್ದರು.


