ಸುರತ್ಕಲ್-ನಂತೂರು ಹೆದ್ದಾರಿ ಡಾಂಬರೀಕರಣಕ್ಕೆ ಟೆಂಡರ್ ಕುರಿತ ಸಂಸದರ ಹೇಳಿಕೆ ಸ್ವಾಗತಾರ್ಹ. ಆದರೆ ಕೂಳೂರು ಸೇತುವೆ, ನಂತೂರು ಮೇಲ್ಸೇತುವೆ ಕಾಮಗಾರಿ ಕುರಿತು ಮೌನ ಯಾಕೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪ್ರಶ್ನಿಸಿದೆ.
ಈ ಕುರಿತು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, “ಸಂಪೂರ್ಣ ಹದಗೆಟ್ಟಿರುವ ಸುರತ್ಕಲ್-ನಂತೂರು ರಾಷ್ಟ್ರೀಯ ಹೆದ್ದಾರಿಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಲು ಆಗ್ರಹಿಸಿ ‘ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ’ ಹಲವು ಸುತ್ತಿನ ಹೋರಾಟಗಳನ್ನು ನಡೆಸಿ ಸಂಸದರೂ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿಗಳನ್ನು ಸಲ್ಲಿಸಿತ್ತು. ಈಗ ಸಂಸದ ಬ್ರಿಜೇಶ್ ಚೌಟರು ಸುರತ್ಕಲ್-ನಂತೂರು ರಾಷ್ಟ್ರೀಯ ಹೆದ್ದಾರಿ ಡಾಂಬರೀಕರಣಕ್ಕೆ ಟೆಂಡರ್ ಕರೆದಿರುವುದಾಗಿ ಹೇಳಿಕೆ ನೀಡಿದ್ದಾರೆ. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ಹರ್ಷ ವ್ಯಕ್ತಪಡಿಸಿದೆ. ಅದೇ ಸಂದರ್ಭ, ಡಾಂಬರೀಕರಣ ಕಾಮಗಾರಿ ಮಳೆಗಾಲಕ್ಕೆ ಮುಂಚಿತವಾಗಿ ಪೂರ್ಣಗೊಳ್ಳುವುದನ್ನು ಸಂಸದರು ಖಾತರಿ ಪಡಿಸಬೇಕು” ಎಂದು ಸಮಿತಿ ಪರವಾಗಿ ಆಗ್ರಹಿಸಿದರು.

“ಈ ಹೆದ್ದಾರಿಗೆ ಸಂಬಂಧಿಸಿ ಮತ್ತೊಂದು ಬಹುಮುಖ್ಯ ಬೇಡಿಕೆಯಾದ ಕೂಳೂರು ಹೊಸ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದು, ನಂತೂರು ಮೇಲ್ಸೇತುವೆ ನಿರ್ಮಾಣಕ್ಕೆ ಕಾಲಮಿತಿ ನಿಗದಿಗೊಳಿಸುವ ವಿಷಯಗಳ ಕುರಿತು ಸಂಸದರುಏಕೆ ಮೌನ ವಹಿಸಿದ್ದಾರೆ” ಎಂದು ಪ್ರಶ್ನಿಸಿದರು.
“ಸುರತ್ಕಲ್-ನಂತೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಾಗೂ ವಿನ್ಯಾಸವೇ ಅತ್ಯಂತ ಕಳಪೆಯಾಗಿದೆ. ಅದರ ಮೇಲೆ, ಈ ಹೆದ್ದಾರಿಯನ್ನು ಪೂರ್ಣಪ್ರಮಾಣದಲ್ಲಿ ದುರಸ್ತಿಗೊಳಿಸದೆ ಆರೇಳು ವರ್ಷಗಳು ದಾಟಿದೆ. ಮಳೆಗಾಲದಲ್ಲಿ ಸಾಲು ಸಾಲು ಗುಂಡಿಗಳು ನಿರ್ಮಾಣಗೊಂಡು ವಾಹನ ಸವಾರರ ಪಾಲಿಗೆ ಮಾರಣಾಂತಿಕವಾಗುತ್ತಿದೆ. ಕಳೆದ ಮಳೆಗಾಲದಲ್ಲೂ ಈ ಹೆದ್ದಾರಿ ಗುಂಡಿಗೆ ವಾಹನಗಳು ಬಿದ್ದು ಹಲವಾರು ಸಾವು ನೋವುಗಳು ಸಂಭವಿಸಿವೆ. ಈ ಕುರಿತು ಹೋರಾಟ ಸಮಿತಿ ಹಲವು ಸುತ್ತಿನ ಪ್ರತಿಭಟನೆ, ಧರಣಿಗಳನ್ನು ನಡೆಸಿ ಪೂರ್ಣ ಪ್ರಮಾಣದ ದುರಸ್ತಿಗೆ ಆಗ್ರಹಿಸುತ್ತ ಬಂದಿದೆ. ಕೊನೆಗೂ ಈಗ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿರುವುದು ಸಮಾಧಾನಕರ. ಆದರೆ, ಹೆದ್ದಾರಿ ಪ್ರಾಧಿಕಾರದ ಎಂದಿನ ಚಾಳಿಯಂತೆ ಪ್ರಕ್ರಿಯೆಗಳು ವಿಳಂಬಗೊಂಡರೆ ಮಳೆಗಾಲದಲ್ಲಿ ಗಂಭೀರ ಸಮಸ್ಯೆ ಎದುರಾಗಲಿದೆ. ಇಂತಹ ವಿಳಂಬ ನೀತಿಗೆ ಅವಕಾಶ ಕೊಡದೆ, ಮಳೆಗಾಲಕ್ಕೆ ಮುಂಚಿತವಾಗಿ ದುರಸ್ತಿ, ಡಾಂಬರೀಕರಣ ಪೂರ್ಣಗೊಳ್ಳುವುದನ್ನು ಖಾತರಿ ಪಡಿಸಬೇಕು” ಎಂದು ಸಂಸದರಿಗೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಂಟ್ವಾಳ | ಖಾಸಗಿ ಬಸ್‌ಗಳದ್ದೇ ಕಾರುಬಾರು: ವಿಟ್ಲದಲ್ಲಿ ಮರೀಚಿಕೆಯಾಗಿಯೇ ಉಳಿದ ಸರ್ಕಾರಿ ಬಸ್ ಸೇವೆ!
“ಇದೇ ಹೆದ್ದಾರಿಯ ಭಾಗವಾಗಿರುವ ಕೂಳೂರು ಹೊಸ ಸೇತುವೆಯ ಕಾಮಗಾರಿ ಕುಂಟುತ್ತಿರುವುದು, ನಗರದ ವಾಹನ ದಟ್ಟಣೆಯ ಕೇಂದ್ರವಾಗಿ ರೂಪುಗೊಂಡಿರುವ ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಕುರಿತು ಸಂಸದರು ಕಾಳಜಿ ತೋರದಿರುವದು, ಮೌನ ವಹಿಸಿರುವುದು ನಿರಾಶದಾಯಕ. ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರದಿದ್ದಲ್ಲಿ ಮತ್ತಷ್ಟು ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ” ಎಂದು ‘ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪರವಾಗಿ ಎಚ್ಚರಿಕೆ ನೀಡಿದರು.