ಮಂಗಳೂರು ನಗರದ ಉಳ್ಳಾಲ ಮತ್ತು ಸುತ್ತಮುತ್ತಲಿನ ಸಾವಿರಾರು ನಾಗರಿಕರ ಜ್ಞಾನದಾಹವನ್ನು ತಣಿಸುತ್ತಿದ್ದ ಉಳ್ಳಾಲ ನಗರ ಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನು ಬೇರೆಡೆಗೆ ಸ್ಥಳಾಂತರಿಸಬಾರದು. ಇರುವಲ್ಲಿಯೇ ಸುಸಜ್ಜಿತವಾಗಿ ನವೀಕರಣಗೊಳಿಸಬೇಕು ಎಂದು ಆಗ್ರಹಿಸಿ ಓದುಗರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಉಳ್ಳಾಲ ನಗರ ಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸಾರ್ವಜನಿಕ ಗ್ರಂಥಾಲಯ ಕಟ್ಟಡವು ಸಂಬಂಧಪಟ್ಟ ಅಧಿಕಾರಿಗಲ ನಿರ್ಲಕ್ಷ್ಯದಿಂದಾಗಿ ಶಿಥಿಲಾವಸ್ಥೆಗೆ ತಲುಪಿದೆ. ಈಗಲೋ ಆಗಲೋ ಎಂಬಂಥಾಗಿದ್ದು, ವಾಚಕರ ನಿರಂತರ ಒತ್ತಡದ ಕಾರಣದಿಂದಾಗಿ ನಗರ ಸಭೆಯು ಈಗ ಕಟ್ಟಡದ ದುರಸ್ಥಿ ಕಾರ್ಯ ನಿರ್ವಹಿಸುತ್ತಿದೆ. ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಹತ್ತಿರದ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಈಗ ಗ್ರಂಥಾಲಯವನ್ನು ಸಮುದಾಯ ಭವನದಿಂದಲೂ ಬೇರೆ ಕಡೆಗೆ ಸ್ಥಳಾಂತರಿಸಲಾಗುತ್ತದೆ ಎಂಬ ಸುದ್ಧಿ ಹರಡಿದ್ದು ಅದನ್ನು ಸ್ಥಳಾಂತರಿಸಬಾರದೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಹಳೆಯ ಕಟ್ಟಡವನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕು ಹಾಗೂ ಅದರಲ್ಲಿಯೇ ಗ್ರಂಥಾಲಯ ನಿರ್ಮಿಸಿದರೆ ನಾಗರಿಕರಿಗೆ ಬಹಳ ಅನುಕೂಲವಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯ ಕಾರಣದಿಂದಾಗಿ ಅಪರ ಜಿಲ್ಲಾಧಿಕಾರಿ ಜಿ. ಸಂತೋಷ್ ಕುಮಾರ್ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಇದನ್ನು ಓದಿದ್ದೀರಾ? ವಕ್ಫ್ ಆಸ್ತಿ ದೇವರ ಹೆಸರಿನಲ್ಲಿ ಮುಸ್ಲಿಮರೇ ನೀಡಿದ ದಾನ; ರಾಜಕೀಯ ಕಾರಣಕ್ಕೆ ಕೆಸರೆರಚಾಟ ಸಲ್ಲದು
ಗ್ರಂಥಾಲಯಕ್ಕೆ ನಿರಂತರವಾಗಿ ಓದಲು ಬರುತ್ತಿರುವ ಸಾರ್ವಜನಿಕರ ಪರವಾಗಿ ಉಳ್ಳಾಲದ ಹಿರಿಯ ನಾಗರಿಕರಾದ ಜನಾಬ್ ಆದಂ ಹಾಜಿ, ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರಾಧ್ಯಾಪಕರಾದ ನಿಝಮ್ ಉಳ್ಳಾಲ್ , ಆಧಾರ್ ಕಾರ್ಯಕರ್ತರಾದ ಅನ್ಸಾರ್ ಉಳ್ಳಾಲ್, ಎಸ್ಸೆಸ್ಸೆಫ್ ಕಾರ್ಯಕರ್ತರಾದ ಮುಹಮ್ಮದ್ ಶರೀಫ್ ಪಟ್ಲ, ಸಾಮಾಜಿಕ ಕಾರ್ಯಕರ್ತರಾದ ಮುಹಮ್ಮದ್ ನೌಶೀರ್ , ಯೂತ್ ಕಾಂಗ್ರೆಸ್ ಕಾರ್ಯಕರ್ತ ಸದ್ದಾಮ್ ಕಲ್ಲಾಪು ಹಾಗೂ ಉಳ್ಳಾಲಬೈಲ್ ಡಿವೈಎಫ್ಐ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮೊದಲಾದವರು ನಿಯೋಗದಲ್ಲಿದ್ದರು.
