ಜನವರಿ 23 ರಂದು ಮಂಗಳೂರಿನ ಬಿಜೈ ಕೆಎಸ್‌ಆರ್‌ಟಿಸಿ ಬಳಿ ಅದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ ‘ಕಲರ್ಸ್’ ಎಂಬ ಯೂನಿಸೆಕ್ಸ್ ಸಲೂನ್‌ಗೆ ದಾಳಿ ನಡೆಸಿದ ಘಟನೆ ಸಂಬಂಧ ಪ್ರಮುಖ ಆರೋಪಿ ಪ್ರಸಾದ್ ಅತ್ತಾವರ ಸೇರಿ 14 ಮಂದಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. 14 ಮಂದಿ ಬಂಧಿತರ ಪೈಕಿ ಓರ್ವ ಸ್ಥಳೀಯ ಪತ್ರಕರ್ತನನ್ನೂ ಕೂಡ ಪೊಲೀಸರು ಬಂಧಿಸಿರುವ ವಿಚಾರ ಬೆಳಕಿಗೆ ಬಂದಿದೆ.
ದಾಂಧಲೆ ನಡೆಸಲಿದ್ದಾರೆ ಎಂಬ ಸುದ್ದಿ ಸಿಕ್ಕಿದ ತಕ್ಷಣ ಕ್ಯಾಮರಾ ಹಿಡಿದುಕೊಂಡು ‘EXCLUSIVE’ ದೃಶ್ಯ ಹಿಡಿಯಲೆಂದು ಹೋಗಿದ್ದ ಸ್ಥಳೀಯ ಕ್ಯಾಮರಾಮೆನ್ ಬಂಧಿತ ಆರೋಪಿಗಳ ಪೈಕಿ ಓರ್ವ ಎಂದು ತಿಳಿದುಬಂದಿದೆ.
ಬಂಧಿತ ಸ್ಥಳೀಯ ಪತ್ರಕರ್ತನನ್ನು ಮಂಗಳೂರಿನ ಮಂಕಿ ಸ್ಟ್ಯಾಂಡ್‌ನ ಅಮರ್ ಆಳ್ವ ರಸ್ತೆಯ ನಿವಾಸಿ, ಕ್ಯಾಮೆರಾ ಮ್ಯಾನ್ ಶರಣ್ ರಾಜ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿ ಪ್ರತಿಯೊಬ್ಬ ವ್ಯಕ್ತಿಯ ನಿರ್ದಿಷ್ಟ ಪಾತ್ರ, ಇತರರ ಪಾಲ್ಗೊಳ್ಳುವಿಕೆಯ ಬಗ್ಗೆಯೂ ಮತ್ತಷ್ಟು ತನಿಖೆ ಮಾಡಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಪಬ್ ದಾಳಿಯಲ್ಲೂ ಬಂಧನಕ್ಕೊಳಗಾಗಿದ್ದ!
ಕ್ಯಾಮೆರಾ ಆಪರೇಟರ್ ಶರಣ್ ರಾಜ್ ಈ ಹಿಂದೆ ಅಂದರೆ 2012ರ ಜುಲೈ 28ರಂದು ಮಂಗಳೂರಿನ ಹೋಮ್ ಸ್ಟೇ ಒಂದರಲ್ಲಿ ಯುವಕ-ಯುವತಿಯರ ಗುಂಪು ಹುಟ್ಟುಹಬ್ಬ ಆಚರಿಸುತ್ತಿದ್ದರು. ಈ ವೇಳೆ, ಅದನ್ನು ರೇವ್ ಪಾರ್ಟಿ ಎಂದು ಆರೋಪಿಸಿ 13 ಯುವಕ ಯುವತಿಯರ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿದ್ದರು. ಹಲ್ಲೆಯ ವೀಡಿಯೊಗಳು ಸುದ್ದಿ ವಾಹಿನಿಗಳಲ್ಲಿ ವಾರಗಟ್ಟಲೆ ಪ್ರಸಾರವಾಗುವ ಮೂಲಕ ಈ ಪ್ರಕರಣ ದೇಶಾದ್ಯಂತ ಗಮನ ಸೆಳೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಮಾಡುವ ಮೂಲಕ ಪತ್ರಕರ್ತರಾದ ನವೀನ್ ಸೂರಿಂಜೆ ಅವರು ದೇಶದ ಗಮನ ಸೆಳೆದಿದ್ದರು. ‘ಮಂಗಳೂರಿನ ಮಾನ ಹರಾಜು ಮಾಡಿದ್ದಾರೆ’ ಎಂದು ಆರೋಪಿಸಿ, ಪ್ರಕರಣ ದಾಖಲಿಸಿದ್ದರಿಂದ ಪತ್ರಕರ್ತ ನವೀನ್ ಸೂರಿಂಜೆ ಅವರನ್ನೂ ಕೂಡ ಬಂಧಿಸಲಾಗಿತ್ತು. ಆ ಬಳಿಕ ಅವರು ಬಿಡುಗಡೆಗೊಂಡಿದ್ದರು.
ಮಂಗಳೂರಿನ ಪಡೀಲ್‌ನಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇನಲ್ಲಿ ನಡೆದ ದಾಳಿಯ ವೇಳೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಜೊತೆಗೆ ಸೇರಿ ದಾಳಿ ಮಾಡಿದ್ದ ಆರೋಪದಲ್ಲಿ ಕೂಡ ಕ್ಯಾಮೆರಾ ಆಪರೇಟರ್ ಶರಣ್ ರಾಜ್ ಬಂಧನಕ್ಕೊಳಗಾಗಿದ್ದರು. ಪಬ್ ದಾಳಿ ಪ್ರಕರಣ 12 ವರ್ಷಗಳ ಬಳಿಕ ಪ್ರಕರಣ ಮುಗಿದಿದೆ. ಹಲ್ಲೆ ನಡೆಸಿದ್ದ ಎಲ್ಲ ಆರೋಪಿಗಳನ್ನು ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಎಸ್.ವಿ. ಕಾಂತರಾಜು ಅವರು 2024ರ ಆಗಸ್ಟ್ 6ರಂದು ಎಲ್ಲ 39 ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ದಾಳಿ ನಡೆಯುವ ಬಗ್ಗೆ ಮಾಹಿತಿ ಇದ್ದರೂ ಕೂಡ ಪೊಲೀಸರಿಗೆ ತಿಳಿಸದೇ ಕ್ಯಾಮರಾ ಹಿಡಿದುಕೊಂಡು ರೆಕಾರ್ಡ್ ಮಾಡಲು ಹೋಗಿರುವುದರಿಂದ ಪೊಲೀಸರು ಶರಣ್ ರಾಜ್ ಅವರನ್ನು ಬಂಧಿಸಿರುವುದಾಗಿ ತಿಳಿದುಬಂದಿದೆ. ಅಲ್ಲದೇ, ಮಂಗಳೂರು ಪೊಲೀಸರು ಹೊರಡಿಸಿರುವ ಪ್ರಕಟಣೆಯಲ್ಲೂ ‘ಕ್ಯಾಮರಾ ಮೆನ್’ ಎಂದು ಉಲ್ಲೇಖಿಸಿದ್ದಾರೆ.

ಕೆಲವೇ ತಿಂಗಳ ಹಿಂದೆ ಈ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಸ್ಥಳೀಯ ಪತ್ರಕರ್ತ ಶರಣ್ ರಾಜ್ ಮತ್ತೆ ಇಂಥದ್ದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವುದು ವಿಪರ್ಯಾಸವೇ ಸರಿ.
ಒಟ್ಟು 14 ಮಂದಿಯ ಬಂಧನ
ಜ.23ರ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಮಂಗಳೂರು ಪೊಲೀಸರು 14 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಸಾದ್ ಅತ್ತಾವರ, ಹರ್ಷರಾಜ್, ಮೋಹನ್ ದಾಸ್, ಪುರಂದರ, ಸಚಿನ್, ರವೀಶ್, ಸುಕೇತ್, ಅಂಕಿತ್, ಕಾಳಿ ಮುತ್ತು, ಅಭಿಲಾಷ್, ದೀಪಕ್, ವಿಘ್ನೇಶ್, ಶರಣ್ ರಾಜ್, ಪ್ರದೀಪ್ ಪೂಜಾರಿ ಎಂದು ಗುರುತಿಸಲಾಗಿದೆ.
