ಭಾರತವು ಡಿಜಿಟಲ್ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧಿಸಿದೆ. ಜತೆಗೆ ಅದರ ಉಪಯೋಗಗಳು ಹಲವು ಕ್ಷೇತ್ರಗಳಲ್ಲಿ ಜನಪ್ರಿಯವಾಗಿವೆ. ಆದರೆ ಅವಶ್ಯಕವಾಗಿರುವ ಭದ್ರತಾ ಕ್ರಮಗಳನ್ನು ಜನಸಾಮಾನ್ಯರು ತಿಳಿಯದಿರುವುದರಿಂದ ವಂಚನೆಗಳು ಮಿತಿಮೀರುತ್ತಿವೆ ಎಂದು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯ(ಎನ್‌ಐಟಿಕೆ)ದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಡಾ| ಆಲ್ವಿನ್ ರೋಶನ್ ಪಾಯಸ್ ಹೇಳಿದರು.
ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಎನ್‌ಐಟಿಕೆ ಸುರತ್ಕಲ್, ಸೈಬರ್ ಸೆಕ್ಯೂರಿಟಿ ರಿಸರ್ಚ್ ಲ್ಯಾಬ್, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಕಾರದೊಂದಿಗೆ ಶಾಲಾ ಕಾಲೇಜುಗಳಲ್ಲಿ ʼಸೈಬರ್ ಸೆಕ್ಯೂರಿಟಿ ಮತ್ತು ಕ್ರಿಪ್ಟೋಗ್ರಫಿʼ ಕಾರ್ಯಾಗಾರಗಳನ್ನು ಏರ್ಪಡಿಸಿ ಭದ್ರತೆಯ ಹಲವು ಮಜಲುಗಳನ್ನು ಪರಿಚಯಿಸುವ ಪ್ರಯತ್ನ ಮಾಡುತ್ತಿದೆ” ಎಂದರು.
ಎನ್‌ಐಟಿಕೆ ಸಹಾಯಕ ಪ್ರೊಫೆಸರ್ ಡಾ| ಮಹೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, “ಮುಂದಿನ ವರ್ಷದಿಂದ ಸಂಸ್ಥೆಗಳಲ್ಲಿ ನಡೆಸುವ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಮೂಲಕ ತಂತ್ರಜ್ಞಾನವು ಎಲ್ಲರನ್ನು ತಲುಪುವ ಹಾಗೂ ಸಂಬಂಧಿತ ಆರ್ಥಿಕ ಅಪರಾಧಗಳನ್ನು ತಡೆಗಟ್ಟುವ ಪ್ರಯತ್ನ ಮಾಡಬೇಕು” ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ಕೆ ವಿ ರಾವ್ ಮಾತನಾಡಿ, “ಎನ್‌ಐಟಿಕೆ ಮತ್ತು ಭಾರತ ಸರ್ಕಾರದ ಈ ಯೋಜನೆಯು ಆರ್ಥಿಕ ಕ್ಷೇತ್ರದಲ್ಲಿ ಸೈಬರ್ ವಂಚಕರ ಹಾವಳಿಯನ್ನು ತಡೆಗಟ್ಟುವ ಒಂದು ಉತ್ತಮ ಪ್ರಯತ್ನ. ಡಿಜಿಟಲ್ ವಿಜ್ಞಾನ ತಂತ್ರಜ್ಞಾನವನ್ನು ವಿಫುಲವಾಗಿ ಅನುಸರಿಸುತ್ತಿರುವ ಎಲ್ಲಾ ಕ್ಷೇತ್ರಗಳಲ್ಲಿ ಭದ್ರತಾ ಕ್ರಮಗಳ ಬಗ್ಗೆ ಅಗತ್ಯ ಕ್ರಮ ಕೈಗೊಂಡಲ್ಲಿ ಆರ್ಥಿಕ ಅಪರಾಧಗಳನ್ನು ತಡೆಯಬಹುದು. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು” ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದ.ಕ. ಜಿಲ್ಲಾಧ್ಯಕ್ಷರಾಗಿ ಎಂ. ದಿವಾಕರ್ ರಾವ್ ಬೋಳೂರು ಆಯ್ಕೆ
ಬಳಿಕ ಎನ್‌ಐಟಿಕೆ ವಿದ್ಯಾರ್ಥಿಗಳಿಂದ ಪ್ರಾತ್ಯಕ್ಷಿಕೆಗಳು ನಡೆದವು. ಕೇಂದ್ರದ ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಭಟ್, ಇನೋವೇಶನ್ ಹಬ್‌ನ ಮೆಂಟರ್ ಅಂಬಿಕಾ, ಶೈಕ್ಷಣಿಕ ಸಹಾಯಕಿ ರಶ್ಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
