ಸಂಸತ್ತಿನಿಂದ ಇತ್ತೀಚೆಗೆ ಪಾರಿತಗೊಂಡ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(ಎಸ್‌ಐಒ)ದಿಂದ ಶನಿವಾರ ಬೆಳಿಗ್ಗೆ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಾಮಾಜಿಕ ಮುಖಂಡರು ಹಾಗೂ ಸಂಘಟನೆಯ ಮುಖಂಡರು ಪಾಲ್ಗೊಂಡು, ಈ ವಿಧೇಯಕವು ಸಂವಿಧಾನ ಪರ ಮೌಲ್ಯಗಳಿಗೆ ವಿರುದ್ಧವಾಗಿದ್ದು, ಅಲ್ಪಸಂಖ್ಯಾತರನ್ನು ಗುರಿಯಾಗಿಸುವುದೆಂದು ಆರೋಪಿಸಿದರು.
ಎಸ್‌ಐಒ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಸಿಫ್ ಡಿ ಕೆ ಮಾತನಾಡಿ, “ಇದು ಕೇವಲ ಕಾನೂನು ಪ್ರಶ್ನೆಯಲ್ಲ. ಇದು ಮುಸ್ಲಿಮರ ಆಸ್ತಿಗಳ ಮೇಲೆ ಕಣ್ಣಿಟ್ಟು ನಮ್ಮ ಅಸ್ತಿತ್ವದ ಮೇಲೆ ದಾಳಿ ಮಾಡುವ ಪ್ರಯತ್ನ. ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರಿಗೆ ಏನು ಕೆಲಸ? ಮುಸ್ಲಿಮರ ಸಾಂವಿಧಾನಿಕ ಹಕ್ಕನ್ನು ಪಡೆದುಕೊಳ್ಳುವುದಕ್ಕೆ ಎಲ್ಲ ಸಂಘಟನೆಗಳನ್ನು ಒಟ್ಟು ಸೇರಿಸಿ ಎಸ್‌ಐಒ ಪ್ರತಿಭಟನೆಯನ್ನು ಮುಂದುವರಿಸಲಿದೆ” ಎಂದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಮಾತನಾಡಿ, “ಈ ಹಿಂದೆ ವಕ್ಫ್ ಕಾನೂನಿಗೆ ತಂದ ತಿದ್ದುಪಡಿಗಳಿಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಇದೀಗ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಮಡಿಲ ಮಾಧ್ಯಮಗಳು ಅದಕ್ಕೆ ಬೆಂಬಲ ನೀಡುತ್ತಿವೆ. ಇದು ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದು ಹೇಳಿದರು.
ಮಾಜಿ ಮೇಯರ್ ಅಶ್ರಫ್ ಮಾತನಾಡಿ, “ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಈ ರೀತಿಯ ಕ್ರಮಗಳು ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿವೆ. ನಾವು ಇದನ್ನು ಒಪ್ಪುವುದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ಈ ಮಸೂದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ಮಂಗಳೂರಿನಲ್ಲಿ ಇನ್ನೂ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ ಮಾತನಾಡಿ, “ನಮ್ಮ ಹೋರಾಟ ಹಿಂದೂ-ಮುಸ್ಲಿಂ ಹೋರಾಟವಲ್ಲ. ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರುವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ. ಈ ಮಸೂದೆ ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಳಿಸುವ ಯತ್ನವಾಗಿದೆ” ಎಂದು ಹೇಳಿದರು.
ಇಕ್ರಾ ಅರಬಿಕ್ ಇನ್ಸ್‌ಟಿಟ್ಯೂಟ್ ಪ್ರಾಂಶುಪಾಲ ಫರ್ಹಾನ್ ನದ್ವಿ ಮಾತನಾಡಿ, “ನಮ್ಮ ಪೂರ್ವಜರು ಅಲ್ಲಾಹನನ್ನು ಸಂತೃಪ್ತಪಡಿಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನು ವಕ್ಫ್. ಅಲ್ಲದೆ ಯಾರಿಂದಲೋ ಕಬಳಿಸಿದ ಜಮೀನಲ್ಲ. ಯಾರಿಂದಲೋ ಕಬಳಿಸಿದ ಜಮೀನು ವಕ್ಫ್ ಆಗಲು ಸಾಧ್ಯವೂ ಇಲ್ಲ. ಧರ್ಮವೆಂಬ ಗೋಡೆಯನ್ನು ಬದಿಗಿಟ್ಟು ಎಲ್ಲ ಭಾರತೀಯರು ನಮ್ಮ ಜತೆಗೆ ಕೈ ಜೋಡಿಸಬೇಕೆಂದು ಕೇಳುತ್ತೇವೆ. ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲ ಶೋಷಿತ ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಯಾಗಿ ಗುರಿಯಾಗುತ್ತವೆ” ಎಂದರು.
ಸಾಲಿಡಾರಿಟಿ ಯೂಥ್ ಮೂಮೆಂಟ್ ಜಿಲ್ಲಾಧ್ಯಕ್ಷ ಅಸ್ಲಂ ಉಪ್ಪಿನಂಗಡಿ ಮಾತನಾಡಿ, “ಈ ವಿಧೇಯಕವು ದೇಶದ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಸರ್ಕಾರದ ಯತ್ನವಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುವುದಾದರೆ ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ. ವಿದ್ಯಾರ್ಥಿಗಳು ಮತ್ತು ಯುವಕರು ಬೀದಿಗಿಳಿದರೆ ವಿಜಯವು ನಿಶ್ಚಿತವಾಗಿದೆ. ನಾವು ಶಾಂತಿಯುತ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಯುವಜನರು ವಿದೇಶದಲ್ಲಿ ಉದ್ಯೋಗ ಹುಡುಕಲು ಕೌಶಲ್ಯ ಸಹಕಾರಿ: ಸಚಿವ ಶರಣಪ್ರಕಾಶ್ ಪಾಟೀಲ್
ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರಾಧ್ಯಕ್ಷ ಕೆ ಎಂ ಅಶ್ರಫ್ ಮಾತನಾಡಿ, “ಬಹುಸಂಸ್ಕೃತಿ ಹೊಂದಿರುವ ದೇಶಗಳಲ್ಲಿ ಕಂಡುಬರುವ ಪ್ರಗತಿ ಏಕಸಂಸ್ಕೃತಿ ದೇಶಗಳಲ್ಲಿಲ್ಲ. ಇಂದಿನ ಸರ್ಕಾರದಲ್ಲಿರುವ ಪಕ್ಷ ಮತ್ತು ಅದರ ಮಾತೃ ಸಂಘಟನೆ ಭಾರತದ ಬಹುಸಂಸ್ಕೃತಿಗೆ ವಿರುದ್ಧವಾಗಿದೆ. ಒಂದು ಸಮುದಾಯವನ್ನು ವೈರಿಗಳಂತೆ ಮಾಡಿ ಅವರನ್ನು ಗುರಿಯಾಗಿಸಿ ಸರ್ಕಾರ ಕಾನೂನು ತರುತ್ತಿದೆ. ಮುಸ್ಲಿಮರಿಗೆ ತಮ್ಮ ಧರ್ಮದನುಸಾರ ನಡೆದುಕೊಳ್ಳುವ ಅಧಿಕಾರವನ್ನು ಸಂವಿಧಾನ ನೀಡಿದೆ. ಈ ವಕ್ಫ್ ಮಸೂದೆಯು ಆ ಅಧಿಕಾರಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದರು.