ನಿರ್ಮಾಣ ಹಂತದ ಕಟ್ಟಡದ ಸಮೀಪ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಬಲ್ಮಠದ ಸಮೀಪ ನಡೆದಿದೆ.
ಕಾಮಗಾರಿ ವೇಳೆ ಏಕಾಏಕಿ ಮಣ್ಣು ಕುಸಿದಿದ್ದು, ಕೆಲಸದಲ್ಲಿ ನಿರತರಾಗಿದ್ದ ಇಬ್ಬರು ಕಾರ್ಮಿಕರು ಮಣ್ಣಿನ ಅಡಿ ಸಿಲುಕಿದ್ದರು. ಮಣ್ಣಿನಡಿ ಸಿಲುಕಿದ್ದ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ.
ರಕ್ಷಿಸಲ್ಪಟ್ಟ ಕಾರ್ಮಿಕನನ್ನು ರಾಜ್ ಕುಮಾರ್ (18) ಎಂದು ಗುರುತಿಸಲಾಗಿದ್ದು, ಮತ್ತೋರ್ವ ಕಾರ್ಮಿಕ ಉತ್ತರ ಪ್ರದೇಶದ ಚಂದನ್ ಕುಮಾರ್(30) ಅವರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಪಡೆಯ ಅಧಿಕಾರಿಗಳು ಪ್ರಯತ್ನಿಸುತ್ತಿರುವುದಾಗಿ ವರದಿಯಾಗಿದೆ. ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿರುವುದಾಗಿ ತಿಳಿದುಬಂದಿದೆ.
ಈಗಾಗಲೇ ರಕ್ಷಿಸಲ್ಪಟ್ಟ ಕಾರ್ಮಿಕ ರಾಜ್ ಕುಮಾರ್‌ನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಕ್ರೀಟ್ ಗೋಡೆಗೆ ರಂಧ್ರ ತೆಗೆದ ರಕ್ಷಣಾ ತಂಡ
ಮಣ್ಣಿನಡಿಯಲ್ಲಿ ಸಿಲುಕಿರುವ ಮತ್ತೋರ್ವ ಕಾರ್ಮಿಕ ಚಂದನ್ ಕುಮಾರ್ ಅವರನ್ನು ರಕ್ಷಣಾ ತಂಡ ಪತ್ತೆ ಹಚ್ಚಿದ್ದು, ಕಾಂಕ್ರೀಟ್ ಗೋಡೆಗೆ ರಂಧ್ರ ತೆಗೆದು ರಕ್ಷಿಸುವಲ್ಲಿ ನಿರತವಾಗಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
