ಮಂಗಳೂರು ಹೊರವಲಯದ ಫರಂಗಿಪೇಟೆಯಿಂದ ಫೆ.25ರಂದು ನಾಪತ್ತೆಯಾಗಿದ್ದ ವಿದ್ಯಾರ್ಥಿ ದಿಗಂತ್ ಕೊನೆಗೂ ಉಡುಪಿಯಲ್ಲಿ ಪತ್ತೆಯಾಗಿರುವುದಾಗಿ ವರದಿಯಾಗಿದೆ.
12 ದಿನಗಳ ಹಿಂದೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಮಾ.8ರ ಶನಿವಾರ ಕೊನೆಗೂ ಉಡುಪಿಯ ಕಲ್ಸಂಕದ ಬಳಿ ಇರುವ ಡಿ ಮಾರ್ಟ್ ಮಾರಾಟ ಮಳಿಗೆಯ ಬಳಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಪೊಲೀಸರು ಆತನನ್ನು ಮಂಗಳೂರಿಗೆ ಕರೆತರುತ್ತಿದ್ದಾರೆ ಎನ್ನಲಾಗಿದೆ.
ಕಳೆದ 12 ದಿನಗಳಿಂದ ದಿಗಂತ್ ನ ಪತ್ತೆಗಾಗಿ ಪೊಲೀಸರ ತಂಡ ವಿವಿಧ ರೀತಿಯ ಕಾರ್ಯಾಚರಣೆಗಳನ್ನು ನಡೆಸಿತ್ತು. ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸಿತ್ತು. ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ.ನ ಭಾಗದಲ್ಲಿ ಹುಡುಕಾಟ ಮಾಡಲು ಯೋಜನೆ ತಯಾರಿಸಿ ಕಾರ್ಯ ಆರಂಭಿಸಿತ್ತು.
40ಕ್ಕೂ ಅಧಿಕ ಪೊಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿಎಆರ್ ತಂಡದ 30 ಪೊಲೀಸರು, ರೈಲ್ವೆ ಪೊಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಮಾಡ್, ಡೋನ್ ಕ್ಯಾಮೆರಾಗಳನ್ನು ಬಳಸಿ ಹುಡುಕಾಟ ನಡೆಸಿದ್ದರು. ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವು ವಿಧಾನಸಭೆಯ ಅಧಿವೇಶನದಲ್ಲೂ ಕೂಡ ಚರ್ಚೆಯಾಗಿತ್ತು.
ಫೋನ್ ಮೂಲಕ ಕುಟುಂಬಸ್ಥರ ಜೊತೆ ಮಾತುಕತೆ
ಡಿ ಮಾರ್ಟ್ ಮಾರಾಟ ಮಳಿಗೆಯ ಬಳಿ ಪತ್ತೆಯಾದ ದಿಗಂತ್ ಅನ್ನು ಅಲ್ಲಿನ ಸಿಬ್ಬಂದಿಗಳು ಗಮನಿಸಿದ್ದಾರೆ. ಆ ಬಳಿಕ ಆತನನ್ನು ವಿಚಾರಿಸಿದಾಗ ನಾಪತ್ತೆಯಾದ ದಿಗಂತ್ ಎಂದು ಖಚಿತಪಡಿಸಿಕೊಂಡಿದ್ದಾರೆ. ಆ ಬಳಿಕ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಸದ್ಯ ಕುಟುಂಬಸ್ಥರಿಗೂ ಮಾಹಿತಿ ನೀಡಿದ್ದು, ಬಳಿಕ ದೂರವಾಣಿಯಲ್ಲಿ ಮಾತನಾಡಿಸಿದ್ದಾರೆ ಎಂದು ತಿಳಿದುಬಂದಿದೆ. ಫೋನ್ ಸಂಭಾಷಣೆಯ ವೇಳೆ, ‘ತನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿತ್ತು’ ಎಂದು ತಾಯಿಯ ವೇಳೆ ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಗಂಗಾವತಿ ಘಟನೆ: ಮೂವರು ಆರೋಪಿಗಳ ಪೈಕಿ ಇಬ್ಬರ ಬಂಧನ
ಏನಿದು ಪ್ರಕರಣ?
ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಫೆ. 25ರ ಮಂಗಳವಾರ ಸಂಜೆ ದೇವಸ್ಥಾನಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದ ದಿಗಂತ್, ದೇವಸ್ಥಾನಕ್ಕೆ ಹೋಗದೆ, ಮನೆಗೂ ಮರಳದೆ ನಾಪತ್ತೆಯಾಗಿದ್ದ. ಬಳಿಕ ಹುಡುಕಾಡಿದಾಗ ಆತನ ಚಪ್ಪಲಿಗಳು ಹಾಗೂ ಮೊಬೈಲ್ ರೈಲ್ವೇ ಹಳಿ ಬಳಿ ಪತ್ತೆಯಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
