ಮಂಗಳೂರಿನ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಸಂಬಂಧ ಸ್ಪೀಕರ್ ಯು ಟಿ ಖಾದರ್ ಅವರ ರಾಜಿನಾಮೆಗೆ ಬಿಜೆಪಿ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, “ಎರಡು ವರ್ಷಗಳ ಹಿಂದೆ ಹತ್ಯೆಯಾದ ಮಹಮ್ಮದ್ ಫಾಸಿಲ್‌ನ ಸಹೋದರ ಆದಿಲ್ ಮೆಹರೂಫ್ ಎಂಬಾತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಬಂಧಿತ ಆರೋಪಿಯಾಗಿದ್ದಾನೆ. ಇತ್ತ ಪ್ರಕರಣದಲ್ಲಿ ಫಾಸಿಲ್ ಕುಟುಂಬದ ಕೈವಾಡವಿಲ್ಲ ಎಂದು ಖಾದರ್ ಹೇಳಿಕೆ ನೀಡಿದ್ದಾರೆ. ತನಿಖೆಗೆ ಮೊದಲೇ ಕೊಲೆ ಆರೋಪಿಯೊಬ್ಬನ ಕುಟುಂಬದ ಪರ ಹೇಳಿಕೆ ನೀಡಿರುವ ಖಾದರ್ ನಡೆಯಲ್ಲಿ ಅನುಮಾನವಿದೆ. ಖಾದರ್ ಅವರು ಸ್ಪೀಕರ್ ಆಗಿರುವ ತನಕ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ರಾಜ್ಯಪಾಲರೇ ಮಧ್ಯಪ್ರವೇಶಿಸಿ ರಾಜಿನಾಮೆ ಪಡೆಯಲಿ” ಎಂದು ಒತ್ತಾಯಿಸಿದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ 8 ಮಂದಿಯ ಪೈಕಿ ರಂಜಿತ್ ಮತ್ತು ನಾಗರಾಜ, ಕಳಸದಲ್ಲಿ ಹೋಟೆಲ್, ಹೋಮ್ ಸ್ಟೇ ಹೊಂದಿರುವ ಮುಹಮ್ಮದ್ ಮುಸ್ತಫಾ ಎಂಬುವರ ಕೆಲಸದವರು. ಮುಸ್ತಫಾ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯೊಂದರಲ್ಲಿ ಖಾದರ್ ಮತ್ತು ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಪಾಲ್ಗೊಂಡಿದ್ದರು ಎಂದು ಆರೋಪಿಸಿರುವ ಅವರು, ಪ್ರಕರಣದ ಇನ್ನೊಬ್ಬ ಆರೋಪಿ ಬಜ್ಪೆ ಶಾಂತಿಗುಡ್ಡೆಯ ನಿಯಾಝ್ ಮೀನು ವ್ಯಾಪಾರ ಮಾಡಿಕೊಂಡಿದ್ದನು. ಮುಸ್ತಫನ ಆಪ್ತರು ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವಾಗ ಪೊಲೀಸರು ಮುಸ್ತಫಾನನ್ನು ಇನ್ನೂ ಯಾಕೆ ಬಂಧಿಸಿಲ್ಲ? ಕೊಲೆ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಶಾಮೀಲಾಗಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣದ ಹಾದಿ ತಪ್ಪಿಸುತ್ತಿರುವಂತೆ ಕಾಣುತ್ತಿದೆ. ತನಿಖೆಯ ಹೊಣೆಯನ್ನು ಬಜ್ಪೆಯ ಗುಪ್ತಚರ ವಿಭಾಗದ ರಶೀದ್‌ಗೆ ವಹಿಸಕೂಡದು. ಬದಲಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕು. ಹತ್ಯೆಗೂ ಮುನ್ನ ನಡೆದಿತ್ತು ಎನ್ನಲಾದ ಡಿನ್ನರ್ ಪಾರ್ಟಿಯ ಆಯೋಜಕರು ಯಾರು? ಹತ್ಯೆಗೆ ಬಳಸಿದ್ದ ಕಾರು, ಬೈಕ್, ಪಿಕ್ಅಪ್ ವಾಹನ ಒದಗಿಸಿದವರು ಯಾರು ಎಂಬುದರ ಕುರಿತು ತನಿಖೆಯಾಗಬೇಕು” ಎಂದರು.
ಇದನ್ನೂ ಓದಿ: ಮಂಗಳೂರು | ಸಂಘಪರಿವಾರದ ನಿರೂಪಣೆಯನ್ನು ಕಾಂಗ್ರೆಸ್ ನಾಯಕರು ಪಾಲಿಸುತ್ತಿರುವುದು ದುರದೃಷ್ಟಕರ: ಲಬೀದ್ ಶಾಫಿ
“ಸುಹಾಸ್ ಹತ್ಯೆ ಮಾಡುತ್ತೇವೆ ಎಂದು ಬಹಿರಂಗವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಳ್ಳುವವರನ್ನು ಬಂಧಿಸಲಾಗಿಲ್ಲ. ಎಂದೋ ನಡೆದ ಪ್ರಕರಣಗಳ ಆರೋಪಿಗಳ ಮನೆಗೆ ಹೋಗಿ ಅನಗತ್ಯ ವಿಚಾರಣೆ ನಡೆಸಿ ಅವರ ಕುಟುಂಬಸ್ಥರಿಗೆ ಕಿರುಕುಳ ನೀಡಲಾಗುತ್ತಿದೆ. ಕಾರಣವಿಲ್ಲದೆ ಬಿಜೆಪಿ ಪಕ್ಷದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ. ಉದ್ದೇಶಪೂರ್ವಕವಾಗಿಯೇ ಸುಹಾಸ್ ಹತ್ಯೆ ಪ್ರಕರಣವನ್ನು ಕಾನೂನುಬಾಹಿರ ಕೃತ್ಯ ತಡೆ ಕಾಯ್ದೆಯಡಿ ದಾಖಲಿಸಲಾಗಿಲ್ಲ. ಇವೆಲ್ಲವೂ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ” ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಡಿ ವೇದವ್ಯಾಸ ಕಾಮತ್, ಡಾ. ವೈ ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಮೇಯರ್ ಗಳಾದ ಸುಧೀರ್ ಕುಮರ್, ಪ್ರೇಮಾನಂದ ಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.