ಕೆಲವು ದಿನಗಳಿಂದ ನೆಕ್ಕಿಲಾಡಿ ಬಿಳಿಯೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಜೋಡಿ ಕಾಡಾನೆಗಳು ಭಾನುವಾರ ಬೆಳಿಗ್ಗೆ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ವಿಹರಿಸುತ್ತಿದ್ದವು. ಇತ್ತ ನದಿಯ ದಂಡೆಯ ಮೇಲೆ ಸೇರಿದ್ದ ಜನ ಸಮೂಹದಿಂದಾಗಿ ನದಿಯಲ್ಲೇ ದಿಗಂಧನಕ್ಕೀಡಾದ ಘಟನೆ ಜರುಗಿದೆ.
ಶನಿವಾರ ರಾತ್ರಿ ಸುರ್ಯದ ಸುಬ್ರಹ್ಮಣ್ಯ ಭಟ್ ಎಂಬವರ ತೋಟದ ಬಳಿ ಪ್ರತ್ಯಕ್ಷಗೊಂಡ ಕಾಡಾನೆಗಳು ರಾತ್ರಿ ಸರಳೀಕಟ್ಟೆ ಪಿಲಿಗೂಡು, ಅಂಬೊಟ್ಟು ಮಾರ್ಗವಾಗಿ ಇಳಂತಿಲ ಗ್ರಾಮದ ಅಂಡೆತಡ್ಕ ಎಂಬಲ್ಲಿಂದ ನೇತ್ರಾವತಿ ನದಿಗಿಳಿದಿದೆ. ಮುಂಜಾನೆ ಉಪ್ಪಿನಂಗಡಿ ಬಳಿಯ ಕೂಟೇಲುವಿನ ನೇತ್ರಾವತಿ ನದಿಯಲ್ಲಿ ಕಾಡಾನೆಗಳು ಇರುವುದನ್ನು ಕಂಡು ಆನೆಗಳನ್ನು ನೋಡಲು ನದಿ ಕಡೆಗೆ ಜನ ತಂಡೋಪತಂಡವಾಗಿ ಆಗಮಿಸಿದರು. ಜನಸಂದಣಿ ಕಂಡು ಅತ್ತಿತ್ತ ಹೋಗಲಾಗದೇ ನದಿಯ ಮಧ್ಯದ ದಿನ್ನೆಯಲ್ಲಿ ನಿಂತುಕೊಂಡಿತ್ತು.
ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ
ಉಪ್ಪಿನಂಗಡಿಯಲ್ಲಿದ್ದ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಬೋಟನ್ನು ಬಳಸಿಕೊಂಡು ನದಿಗಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಆನೆಗಳು ಜನವಸತಿಯತ್ತ ಬಾರದಂತೆ ಬೆದರಿಸಲು ಯತ್ನಿಸಿದರು. ಒಟ್ಟಿನಲ್ಲಿ ದಿನವಿಡೀ ನದಿಯಲ್ಲಿ ಬೋಟ್ ಮೂಲಕ ಗುಂಡು ಹಾರಿಸುತ್ತಾ ದಡದಲ್ಲಿ ಸುಡುಮದ್ದು ಸಿಡಿಸುವ ಮೂಲಕ ಆನೆಗಳನ್ನು ಉಪ್ಪಿನಂಗಡಿ ಪೇಟೆಯತ್ತ ಸಂಚರಿಸದಂತೆ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸಿದರು. ಸಂಜೆ ಹೊತ್ತಿಗೆ ಆನೆ ನದಿಯಲ್ಲೇ ಕೂಟೇಲು ಕಡೆಯಿಂದ ಪಂಜಳ ತನಕ ಸಂಚರಿಸುವುದು ಹಿಂದಿರುಗುವುದು ಮಾಡುತ್ತಲೇ ಇದ್ದ ಕಾರಣ ಇಲಾಖಾಧಿಕಾರಿಗಳು ಆನೆ ಓಡಿಸುವ ಪ್ರಯತ್ನ ಮಾಡುತ್ತಿದ್ದರು. ಈ ಹರಸಾಹಸದಿಂದ ಕಾಡಾನೆಗಳು ಪಂಜಳ ತಲುಪಿವೆ.
ಸ್ಥಳದಲ್ಲಿ ಮಂಗಳೂರು ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ವಿಭೂತೆ, ಎಸಿಎಫ್ ಸುಬ್ಬಯ್ಯ ನಾಯ್ಕ ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪೆಲೀಸ್ ಅಧಿಕಾರಿಗಳು, ಸುಖಿತಾ ಶೆಟ್ಟಿ, ದಿನೇಶ್ ಬಿ. ನೇತೃತ್ವದ ಗೃಹರಕ್ಷಕ ದಳದ ತಂಡ ಘಟನಾ ಸ್ಥಳದಲ್ಲಿದ್ದು, ಆನೆಗಳ ಸಂಚಾರ ನಿಗಾವಹಿಸಿದರು.
