ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇರಳದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಬಳಿಕ ಅವರನ್ನು ಕೇರಳದ ಕಣ್ಣೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮೃತವ್ಯಕ್ತಿ ಶವಾಗಾರದಲ್ಲಿ ಜೀವಂತವಾಗಿ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ.
ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತೆಗೆ ದಾಖಲಿಸಲಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ಆಸ್ಪತ್ರೆ ಸಿಬ್ಬಂದಿ ಖಚಿತಪಡಿಸಿದ ಬಳಿಕ ಕೇರಳಕ್ಕೆ ಸಾಗಿಸಲಾಗಿತ್ತು. ಇದೇ ವ್ಯಕ್ತಿ ಕೇರಳದ ಕಣ್ಣೂರು ಆಸ್ಪತ್ರೆ ಶವಾಗಾರದಲ್ಲಿ ಜೀವವಾಗಿದ್ದು, ಕೈಗಳು ಚಲನೆಯಾಗಿರುವ ಘಟನೆ ಕಂಡುಬಂದಿದೆ.
ಕಣ್ಣೂರಿನ ಪಚ್ಚಪೊಯಿಕಾ ಮೂಲದ ವೆಳ್ಳುವಕ್ಕಂಡಿಯ ಪವಿತ್ರನ್ ಎಂದು ಗುರುತಿಸಲಾಗಿದ್ದು, ಇವರು ಪಾರ್ಶ್ವವಾಯು ಮತ್ತು ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದರು. ಇನ್ನು ಮಂಗಳೂರಿನಿಂದ ಸಂಜೆ 6.30ರ ಸುಮಾರಿಗೆ ಅವರನ್ನು ಆ್ಯಂಬುಲೆನ್ಸ್ನಲ್ಲಿ ಕಣ್ಣೂರಿಗೆ ಕಳುಹಿಸಲಾಗಿತ್ತು. ರಾತ್ರಿ ತುಂಬಾ ತಡವಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲು ಕುಟುಂಬಸ್ಥರು ನಿರ್ಧರಿಸಿದ್ದರು. ರಾತ್ರಿ ಸುಮಾರು 11.30ಕ್ಕೆ, ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸುವಾಗ, ಕರ್ತವ್ಯದಲ್ಲಿದ್ದ ಅಟೆಂಡರ್ ಜಯನ್ ಅವರು ಅಸಹಜವಾದದ್ದನ್ನು ಗಮನಿಸಿದರು.
ಆ್ಯಂಬುಲೆನ್ಸ್ ಬಾಗಿಲು ತೆರೆದಾಗ ಮೃತಪಟ್ಟಿದ್ದ ವ್ಯಕ್ತಿಯ ಕೈಗಳು ಅಲುಗಾಡಿದಂತೆ ಭಾಸವಾಗಿತ್ತು. ಬಳಿಕ ಎಕೆಜಿ ಆಸ್ಪತ್ರೆಯ ವೈದ್ಯಕೀಯ ತಂಡ ಕೂಡಲೇ ಮಧ್ಯ ಪ್ರವೇಶಿಸಿ ಪವಿತ್ರನ್ ಬದುಕಿರುವುದನ್ನು ಖಚಿತಪಡಿಸಿದರು. ಇದೀಗ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಸದ್ಯ ಪವಿತ್ರನ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಸುದ್ದಿಓದಿದ್ದೀರಾ?: ಮಂಗಳೂರು | ಶಟಲ್ ಬ್ಯಾಡ್ಮಿಂಟನ್ ಆಡುತ್ತಿದ್ದ ವೇಳೆ ಹೃದಯಾಘಾತ: ಯುವಕ ನಿಧನ
ಪವಿತ್ರನ್ ಚೇತರಿಕೆ ಕಾಣುತ್ತಿರುವ ಬೆನ್ನಲ್ಲೇ ಕುಟುಂಬಸ್ಥರು ಮಂಗಳೂರಿನ ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದು, ಆಕ್ರೋಶ ಹೊರಹಾಕುತ್ತಿದ್ದಾರೆ ಜತೆಗೆ ಮಂಗಳೂರಿನ ಆಸ್ಪತ್ರೆ ವಿರುದ್ಧ ದೂರು ದಾಖಲಿಸಲು ಕುಟುಂಬ ಮುಂದಾಗಿದೆ.
