ಮಂಗಳೂರು ನಗರದ ಅಡ್ಯಾರ್ ಕಣ್ಣೂರು ಬಳಿಯ ಷಾ ಗಾರ್ಡನ್ ಮೈದಾನದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಶುಕ್ರವಾರ ನಡೆದ ಪ್ರತಿಭಟನಾ ಸಮಾವೇಶದ ಸಮಯದಲ್ಲಿ ಪೊಲೀಸ್ ಅಧಿಕಾರಿಯವರ ಸರ್ಕಾರಿ ಕಾರನ್ನು ಪ್ರತಿಭಟನಾಕಾರರು ಬಳಸಿರುವ ಕುರಿತು ದೃಶ್ಯ ಮಾಧ್ಯಮ ಪ್ರಸಾರವಾಗುತ್ತಿದ್ದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿರುವ ಬಗ್ಗೆ ಮಂಗಳೂರು ನಗರ ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟೀಕರಣ ನೀಡಿದ್ದಾರೆ.
“ಏಪ್ರಿಲ್ 18ರಂದು ಸಂಚಾರ ಬಂದೋಬಸ್ತು ಕರ್ತವ್ಯದಲ್ಲಿದ್ದ ಎಸಿಪಿ ಸಂಚಾರ ಉಪ ವಿಭಾಗದವರು ಪಡೀಲ್ ಕಡೆಯಿಂದ ಕಾರ್ಯಕ್ರಮದ ಸ್ಥಳದ ಕಡೆಗೆ ತಮ್ಮ ಇಲಾಖಾ ವಾಹನ ಮೂಲಕ ಬಂದು ಇಳಿದು ಅಲ್ಲಿ ಮುಖ್ಯ ದ್ವಾರದ ಬಳಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಎಸಿಪಿಯವರು ಮಂಗಳೂರು ನಗರ ಕಡೆಗೆ ಸಂಚಾರ ನಿಯಂತ್ರಿಸುವ ಕರ್ತವ್ಯಕ್ಕೆ ಬರಲು ಹೆದ್ದಾರಿಯ ರಸ್ತೆ ವಿಭಜಕ ದಾಟಿ ಮುಂದೆ ಅಡ್ಯಾರು ಕಟ್ಟೆ ಬಳಿ ಟರ್ನ್ ಮಾಡಿ ವಾಪಾಸ್ ಬರಲು ಅವರ ಚಾಲಕರಿಗೆ ಸೂಚಿಸಿದ್ದಾರೆ. ವಾಹನ ಚಾಲಕ ಬೈರೇಗೌಡ ಅವರು ಅಡ್ಯಾರು ಕಟ್ಟೆ ಬಳಿ ಬ್ಯಾರಿಕೇಡ್ ಹಾಕಿದ್ದ ಕಾರಣ ಸಹ್ಯಾದ್ರಿ ಕಡೆ ಹೋಗುತ್ತಿದ್ದರು” ಎಂದು ತಿಳಿಸಿದ್ದಾರೆ.

“ಎಸಿಪಿಯವರು ಹೋಗುವ ಸ್ವಲ್ಪ ಸಮಯದ ಹಿಂದೆ ಅಡ್ಯಾರ್ ಗಾರ್ಡನ್ ಬಳಿ ಸಂಜೆಯ ಸುಮಾರು 7.30ಕ್ಕೆ ಟೆಂಪೋ ಟ್ರಾವೆಲರ್ ವಾಹನ ಚಾಲಕನ ಅತೀ ವೇಗ ಮತ್ತು ಅಜಾಗರೂಕತೆ ಚಾಲನೆಯಿಂದ, ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ(16 ವರ್ಷ) ಡಿಕ್ಕಿ ಹೊಡೆದು ಬಲಗಾಲಿನ ಪಾದದ ಮೇಲೆ ಚಕ್ರ ಹಾದುಹೋಗಿದೆ. ಇದರಿಂದ ಬಾಲಕ ಗಾಯಗೊಂಡ ಪರಿಣಾಮ ಸುಮಾರು ಜನ ಸೇರಿದ್ದರು. ಅಲ್ಲೇ ಪಕ್ಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗಳು ಮತ್ತು ಗಾಯಾಳುವಿನ ಕಡೆಯವರು ಎಸಿಪಿಯವರ ವಾಹನ ನಿಲ್ಲಿಸಿ, ಗಾಯಾಳುವನ್ನು ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಸದರಿ ಗಾಯಾಳುವನ್ನು ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ” ಎಂದರು.

“ಅಪಘಾತ ಮಾಡಿರುವ ಟೆಂಪೋ ಟ್ರಾವೆಲರ್ ಸಂಖ್ಯೆ: ಕೆಎ 70 9888 ಮತ್ತು ಅದರ ಚಾಲಕನನ್ನು ಪೊಲೀಸ್ ಸಿಬ್ಬಂದಿ ಆನಂದ ಎಂಬುವವರ ಮೂಲಕ ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದ್ದು, ಇದರ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಏ.29ರಂದು ಬೃಹತ್ ರ‍್ಯಾಲಿ, ಹಕ್ಕೊತ್ತಾಯ ಸಮಾವೇಶ
“ಅಪಘಾತ ನಡೆಯುವ ಸಮಯದಲ್ಲಿ ಕಾರ್ಯಕ್ರಮ ಪ್ರಯುಕ್ತ ಸದರಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಅಪಘಾತಕ್ಕೀಡಾದ ಗಾಯಾಳುವನ್ನು ಚಿಕಿತ್ಸೆ ಕೊಡಿಸುವ ಸಲುವಾಗಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿಯವರು ಅದೇ ಸಮಯಕ್ಕೆ ಬರುತ್ತಿದ್ದ ಎಸಿಪಿರವರ ವಾಹನದ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವುದಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ” ಎಂದರು.

“ಅಪಘಾತದಲ್ಲಿ ಗಾಯವಾದಾಗ ಪ್ರಥಮ ಚಿಕಿತ್ಸೆ(ಗೋಲ್ಡನ್ ಹವರ್) ಕೊಡಿಸುವುದು ಪೊಲೀಸರ ಆದ್ಯ ಕರ್ತವ್ಯವಾಗಿದ್ದು, ಪೊಲೀಸರು ಘಟನೆಯನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದು, ಪೊಲೀಸ್ ಜೀಪಿನ ಚಾಲಕನೊಂದಿಗೆ ಆಸ್ಪತ್ರೆಗೆ ಕಳುಹಿಸಿದ ಸದರಿ ಮಹಿಳಾ ಸಿಬ್ಬಂದಿಯವರು ಕರ್ತವ್ಯ ಮುಂದುವರಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯವರ ಸರ್ಕಾರಿ ಕಾರನ್ನು ಪ್ರತಿಭಟನಕಾರರು ಬಳಸಿದ್ದಾರೆಂಬ ಮಾತುಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಈ ರೀತಿ ಪೊಲೀಸರ ಫೋಟೋಗಳನ್ನು ಬಳಸಿಕೊಂಡು ಸುಳ್ಳು ಸುದ್ದಿ ಪ್ರಕಟಿಸಿ ಪೊಲೀಸರ ಕರ್ತವ್ಯಕ್ಕೆ ಚ್ಯುತಿ ತಂದದ್ದು ಮಾತ್ರವಲ್ಲದೇ ಸಮಾಜದಲ್ಲಿ ಅಶಾಂತಿಗೆ ಪ್ರೇರೇಪಿಸುತ್ತಿರುವ ಇಂತಹ ಗೋದಿ ಮಾಧ್ಯಮಗಳ ಮೇಲೆ ಸುಮೊಟೊ ಕೇಸು ದಾಖಲಿಸಬಾರದೇಕೆ? ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.