ಉಳ್ಳಾಲದಲ್ಲಿ ಕಲ್ಲಿದ್ದಲು ಬಳಸುತ್ತಿರುವ ಫಿಶ್‌ಮಿಲ್‌ಗಳಿಂದಾಗಿ ಕೋಟೆಪುರ, ಮುಳಿಹಿತ್ಲು ಭಾಗದಲ್ಲಿ ವ್ಯಾಪಕವಾಗಿ ಆರೋಗ್ಯ ಸಮಸ್ಯೆಗಳು ಕಾಣಿಸುತ್ತಿದೆ. ಕಲ್ಲಿದ್ದಲು ಬಳಸುತ್ತಿರುವ ಉಳ್ಳಾಲದ ಫಿಶ್‌ಮಿಲ್ ಮುಚ್ಚದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಡಿವೈಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಎಚ್ಚರಿಕೆ ನೀಡಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸಿಆರ್‌ಝೆಡ್ ಕಾನೂನು ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳಿಂದಾಗಿ ನದಿಯೇ ಮುಚ್ಚಿಹೋಗಿದೆ. ಕೋಟೆಪುರ-ಮುಳಿಹಿತ್ಲು ನಡುವೆ ದೋಣಿ ಸಂಪರ್ಕ ಇಲ್ಲದಂಥ ಸ್ಥಿತಿ ನಿರ್ಮಾಣವಾಗಲಿದೆ. ಜಿಲ್ಲಾಡಳಿತ ಕಾನೂನು ಕ್ರಮ ಕೈಗೊಳ್ಳದೆ ಇದ್ದರೆ ನಿರಂತರವಾಗಿ ಚಳವಳಿ ನಡೆಸಲಾಗುವುದು” ಎಂದು ತಿಳಿಸಿದರು.
“ಕಲ್ಲಿದ್ದಲು ಬಳಕೆಯಿಂದಾಗಿ ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ರಕ್ತದೊತ್ತಡ ಹೃದ್ರೋಗ , ತುರಿಕೆ ಅಲರ್ಜಿ, ಚರ್ಮ ಕೆಂಪಾಗುವ ರೋಗ ಸಾಧ್ಯತೆಗಳಿವೆ ಅನ್ನುವುದು ಮಾಹಿತಿ ಹಕ್ಕಿನಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪಡೆದ ವರದಿಯಿಂದ ಬಹಿರಂಗವಾಗಿದೆ. ಯುನೈಟೆಡ್ ಮೆರೈನ್ ಮತ್ತು ಇಂಡೋ ಫಿಶ್ ಮಿಲ್ ಕಲ್ಲಿದ್ದಲು ಬಳಸುವ ಮೂಲಕ ಸ್ಥಳೀಯರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಪೊಲೀಸ್ ಇಲಾಖೆಗೆ ಪ್ರಕರಣ ದಾಖಲಿಸುವಂತೆ ಆರೋಗ್ಯದ ವರದಿಯನ್ನು ನೀಡಿದರೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ” ಎಂದು ದೂರಿದರು.

ಹೋರಾಟ ನಡೆಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ದಬ್ಬಾಳಿಕೆ ನಡೆಸಲಾಗುತ್ತಿದೆ. 2007ರ ವರದಿಯಲ್ಲಿಯೂ ಕೋಟೆಪುರದಲ್ಲಿನ ಫಿಶ್ ಆಯಿಲ್ ಮಿಲ್ ಎಲ್ಲವೂ ಅನಧಿಕೃತ ಅನ್ನುವ ಉಲ್ಲೇಖ ಸರಕಾರ ನೀಡಿರುವ ವರದಿಯಲ್ಲಿದೆ. ಇಂದು ಕೂಡಾ ಅದೇ ಅನಧಿಕೃತ ಮುಂದುವರಿದು ಸಿಆರ್‌ಝೆಡ್ ಕಾನೂನುಗಳನ್ನು ಉಲ್ಲಂಘಿಸಿ ವರ್ಷ ಕಳೆದ ಹಾಗೆ ಹೊಸ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಬಾಯ್ಲರ್ ಸ್ಥಾಪನೆ ನಡೆಸುವಾಗಲೂ ಇಲಾಖೆಗಳೆಲ್ಲವೂ ಫಿಶ್‌ಮಿಲ್‌ನವರಿಗೆ ಬೇಕಾದಂತಹ ರೀತಿಯಲ್ಲಿ ವರದಿಯನ್ನು ರಚಿಸಿ ನೀಡಿದ್ದಾರೆ ಅಲ್ಲದೆ ಖಾಸಗಿ ಆಸ್ಪತ್ರೆಯಿಂದ ವರದಿ ದಾಖಲಿಸಿ ಸ್ಥಳೀಯಾಡಳಿತದಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಕಳ್ಳತನವಾಗಿದ್ದ 672 ಮೊಬೈಲ್ ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು
ಶಬ್ದಮಾಲಿನ್ಯದ ಜೊತೆಗೆ ದುರ್ವಾಸನೆಯೂ ವ್ಯಾಪಕವಾಗಿ ಹಬ್ಬಿ, ಸಾರ್ವಜನಿಕರಿಂದ ದೂರುಗಳ ಸರಮಾಲೆ ಜಿಲ್ಲಾಡಳಿತಕ್ಕೆ ಹೋದರೂ ಕ್ರಮ ಈವರೆಗೆ ಕೈಗೊಂಡಿಲ್ಲ. ಕಲ್ಲಿದ್ದಲು ಬಳಸುವ ಮೀನಿನ ಕಾರ್ಖಾನೆಗಳು ಮುಚ್ಚಲು ಜಿಲ್ಲಾಡಳಿತ ವಿಫಲವಾದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಕಾರದಲ್ಲಿ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ವಿವಿಧ ಹಂತದ ಹೋರಾಟಗಳನ್ನು ನಡೆಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ, ಮೊಹಮ್ಮದ್ ಅಶ್ರಫ್, ರಝಾಕ್ ಮುಡಿಪು, ಮೊಹಮ್ಮದ್ ಮುಸಾಫಿರ್ ವಾಕರ್, ನೌಫಾಲ್ ಕೋಟೆಪುರ ಅಶ್ಫಾಕ್ ಕೋಟೆಪುರ ಉಪಸ್ಥಿತರಿದ್ದರು.
