ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ರಾಜ್ಯ ವಿಧಾನಸಭಾ ಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು.
ಮಂಗಳೂರಿನ ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ (ಬಿಎಸ್‌ಡಬ್ಲ್ಯೂಟಿ) ಮತ್ತು ನರಿಂಗಾನ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಬಿಎಸ್‌ಡಬ್ಲ್ಯೂಟಿ ಸಂಸ್ಥೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಉಚಿತವಾಗಿ ತರಬೇತಿ ನೀಡಿ ಸ್ವಂತ ಶಕ್ತಿ ಮೇಲೆ ಜೀವನ ನಡೆಸಲು ಪೂರಕ ಅವಕಾಶ ಕಲ್ಪಿಸಿದೆ. ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಚೆನ್ನಾಗಿ ಕಲಿತು ಮಹಿಳೆಯರು ಮುಂದೆ ಬರಬೇಕು ಸ್ವಂತ ಅಂಗಡಿ ತೆರೆಯುವ ಹಂತಕ್ಕೆ ಬೆಳೆಯಬೇಕು. ಎಲ್ಲಾ ಧರ್ಮದವರನ್ನು ಒಗ್ಗೂಡಿಸಿ ಆಯೋಜಿಸಿದ ಈ ಕಾರ್ಯಕ್ರಮದಂತೆ ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು. ಊರಿನ ಬೀದಿಗಳಲ್ಲಿ ಎಲ್ಲಾ ಜಾತಿ, ವರ್ಗದ, ಶ್ರೀಮಂತರ, ಬಡವರ ಮಕ್ಕಳು ಆಡಬೇಕು ನಲಿಯಬೇಕು. ಆಗ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ” ಎಂದರು.
ಬಿಎಸ್‌ಡಬ್ಲ್ಯೂಟಿ ಅಧ್ಯಕ್ಷ ಎನ್ ಅಮೀನ್ ಪಕ್ಕಲಡ್ಕ ಮಾತನಾಡಿ, “ಮನುಷ್ಯ ಮನುಷ್ಯನನ್ನು ಜೋಡಿಸುವುದು, ಮನುಷ್ಯನನ್ನು ದೇವರೊಂದಿಗೆ ಜೋಡಿಸುವುದು, ಜಾತಿ ಬೇಧವಿಲ್ಲದ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದು ಬಿಎಸ್ ಡಬ್ಲ್ಯೂ ನ ಉದ್ದೇಶವಾಗಿದೆ. ಯುವಕರು ನಿರರ್ಥಕ ಕಾರ್ಯಗಳಿಂದ ದೂರವಿರುವುದರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಮಂಗಳೂರು | ಏ.12ರಂದು ನಡೆಯಲಿರುವ ಮೂಳೂರು- ಅಡ್ಡೂರು ಜೋಡುಕರೆ ಕಂಬಳಕ್ಕೆ ಭರದ ಸಿದ್ಧತೆ
ಕಾರ್ಯಕ್ರಮದಲ್ಲಿ ನರಿಂಗಾನ ಗ್ರಾಪಂ ಅಧ್ಯಕ್ಷ ನವಾಜ್ ನರಿಂಗಾನ, ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್, ಸಂತ ಲಾರೆನ್ಸ್ ಧರ್ಮಗುರು ಫಾ. ರೆ ಫೆಡ್ರಿಕ್ ಕೊರೆಯ, ಮಂಗಳೂರು ವಿವಿ ನಿವೃತ್ತ ಅಧೀಕ್ಷಕ ಹರೀಶ್ ಕುಮಾರ್ ಕುತ್ತಡ್ಕ, ಕಂಬಳೋತ್ಸವ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ಉಪಾಧ್ಯಕ್ಷ ನಿಯಾಝುರ್ರಹ್ಮಾನ್ ಪೆರ್ಲ, ಗ್ರಾಪಂ ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ಪಿಡಿಒ ರಜನಿ ಡಿ ಗಟ್ಟಿ, ಬಿಎಸ್‌ಡಬ್ಲ್ಯೂಟಿ ಉಪಾಧ್ಯಕ್ಷ ಅಬ್ದುಲ್ಲಾ ಬಜಾಲ್, ಶಿಕ್ಷಕಿ ಮಹಾಲಕ್ಷ್ಮಿ, ಎಂ ಅಶೀರುದ್ದೀನ್ ಸಾರ್ತಬೈಲ್, ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.