ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ನಿದ್ದೆಯಲ್ಲಿದ್ದ ಯುವತಿಯ ಮೇಲೆ ಬಸ್‌ನ ಕಂಡಕ್ಟರ್ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ಬೆಳಕಿಗೆ ಬಂದಿದ್ದು, ಆರೋಪಿ ಕಂಡಕ್ಟರ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಆರೋಪಿ ಕಂಡಕ್ಟರ್‌ನನ್ನು ಬಾಗಲಕೋಟೆ ಮೂಲದ ಪ್ರದೀಪ್ ಎಂದು ಹೆಸರಿಸಲಾಗಿದೆ. ಆತ ಮಂಗಳೂರು ಡಿಪೋದಲ್ಲಿ ಕೆಲಸ ಮಾಡುತ್ತಿದ್ದನೆಂದು ವರದಿಯಾಗಿದೆ.
ಬುಧವಾರ, ಮಂಗಳೂರಿನಿಂದ ಮುಡಿಪು ಮಾರ್ಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ನಗರ ಸಾರಿಗೆಯಲ್ಲಿ ಕಂಡಕ್ಟರ್ ಕೃತ್ಯ ಎಸಗಿದ್ದಾನೆ. ಆತನ ಕೃತ್ಯವನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಆರೋಪಿ ಕಂಡಕ್ಟರ್ ಎಸಗಿರುವ ದುಷ್ಕೃತ್ಯ ಸೆರೆಯಾಗಿದೆ.
ವಿಡಿಯೋ ಬೆಳಕಿಗೆ ಬಂದ ಕೂಡಲೇ, ಕೊಣಾಜೆ ಪೊಲೀಸ್ ಠಾಣೆಯ ಪೊಲೀಸರು ಬಿಎಸ್‌ಎನ್ ಸೆಕ್ಷನ್ 74, 75 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
“ಆರೋಪಿ ಕಂಡಕ್ಟರ್ ಹೆಸರು ಪ್ರದೀಪ್ ಎಂದಾಗಿದೆ. ಮಂಗಳೂರಿನಿಂದ ಮುಡಿಪುವಿಗೆ ತೆರಳುವ ಸರ್ಕಾರಿ ಬಸ್‌ನ ವಿಡಿಯೋ ಇದಾಗಿದೆ. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಈ ವಿಡಿಯೋ ದೊರೆತ ಕೂಡಲೇ ಆರೋಪಿಯನ್ನು ಅಮಾನತು ಮಾಡಿದ್ದೇವೆ” ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಜನಿವಾರ ಮತ್ತು ಹಿಜಾಬ್: ಯಾರದ್ದು ಪಕ್ಷಪಾತ?
“ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಹಾಗಾಗಿಯೇ ತಕ್ಷಣ ಅವರನ್ನು ಅಮಾನತು ಮಾಡಿದ್ದೇವೆ. ಮುಂದೆ ಆತನ ಮೇಲೆ ವಿಚಾರಣೆ ನಡೆಯಲಿದ್ದು, ವಿಚಾರಣೆಯಲ್ಲಿ ಕಂಡಕ್ಟರ್ ತಪ್ಪಿತಸ್ಥ ಎಂಬುದು ಸಾಬೀತಾದರೆ, ಆತ ನೌಕರಿ ಕಳೆದುಕೊಳ್ಳಲಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಆತ ಲೈಂಗಿಕ ದೌರ್ಜನ್ಯ ಎಸಗುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ಉದ್ದೇಶಪೂರ್ವಕವಾಗಿ ಯುವತಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಹಾಗಾಗಿ ಇದು ಗಂಭೀರ ವಿಚಾರವಾಗಿದ್ದು, ಆತನಿಗೆ ತನ್ನನ್ನು ಸಮರ್ಥಿಸಿಕೊಳ್ಳಲು ಕಾರಣಗಳೇ ಇಲ್ಲ” ಎಂದು ರಾಜೇಶ್ ಹೇಳಿದ್ದಾರೆ.
“ಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ನಮ್ಮ ಸಿಬ್ಬಂದಿಗೆ ಪ್ರತಿದಿನ ನಿರ್ದೇಶನ ನೀಡುತ್ತೇವೆ. ಅದನ್ನು ಡಿಪೋಗಳಲ್ಲಿ ಪುನರಾವರ್ತಿತವಾಗಿ ನೀಡುತ್ತಲೆ ಇರುತ್ತೇವೆ. ಆದರೆ ಎಲ್ಲಾ ಕಡೆಯೂ ಒಬ್ಬರಿಬ್ಬರು ಇಂತವರು ಇದ್ದೇ ಇರುತ್ತಾರೆ. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಈ ಘಟನೆಯು ವಿಡಿಯೊ ಮಾಡದೆ ಇದ್ದರೆ ನಮಗೆ ತಿಳಿದು ಬರುತ್ತಲೆ ಇರಲಿಲ್ಲ. ಆದ್ದರಿಂದ ಈ ವಿಡಿಯೊ ಮಾಡಿದವರಿಗೆ ಸೆಲ್ಯೂಟ್. ವಿಡಿಯೊ ಸ್ಪಷ್ಟವಾಗಿದ್ದು, ಕಂಡಕ್ಟರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.” ಎಂದು ರಾಜೇಶ್ ಹೇಳಿದ್ದಾರೆ.