“ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದ ಕುಡುಪು ಎಂಬಲ್ಲಿ ಕಳೆದ ಏಪ್ರಿಲ್ 27ರಂದು ಅಶ್ರಫ್ ಅವರ ಗುಂಪು ಹತ್ಯೆ ನಡೆದಾಗ ಆ ಸ್ಥಳದಲ್ಲಿ ಮಾಜಿ ಕಾರ್ಪೊರೇಟರ್ ಪತಿ ರವೀಂದ್ರ ನಾಯಕ್ ಹಾಜರಿದ್ದರು, ಆದರೆ ಆತ ಅಶ್ರಫ್ ಮೇಲೆ ಹಲ್ಲೆ ಮಾಡಿರುವುದಕ್ಕೆ ಈವರೆಗೆ ನಮಗೆ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಆತ ಪ್ರಮುಖ ಆರೋಪಿಯಾಗಬೇಕಾದರೆ ಹಲ್ಲೆ ಮಾಡಿರಬೇಕು” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಮಂಗಳೂರು ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕೇರಳದ ಅಶ್ರಫ್ ಅವರ ಗುಂಪು ಹತ್ಯೆ ಮತ್ತು ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ತನಿಖೆ ಸಂಬಂಧ ಕೇಳಿ ಬರುತ್ತಿರುವ ಆರೋಪಗಳು ಮತ್ತು ಮೂಡಿರುವ ಅನುಮಾನಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ವಿವರಿಸಿದರು.
“ಅಶ್ರಫ್ ಅವರ ಗುಂಪು ಹತ್ಯೆ ನಡೆದಾಗ ಸ್ಥಳದಲ್ಲಿ 126 ಮಂದಿ ಇರುವುದಕ್ಕೆ ಸಾಕ್ಷ್ಯ ಸಿಕ್ಕಿದೆ, ರವೀಂದ್ರ ನಾಯಕ್ ಕೂಡ ಸ್ಥಳದಲ್ಲಿವುದಕ್ಕೆ ಸಾಕ್ಷಿ ಇದೆ, ಆದರೆ ಹಲ್ಲೆ ಮಾಡಿರುವುದಕ್ಕೆ ಈವರೆಗೆ ಸಾಕ್ಷ್ಯ ಸಿಕ್ಕಿಲ್ಲ. ಸಿಕ್ಕಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದರು.
“ಕ್ರಿಕೆಟ್ ಮೈದಾನದ ಬಳಿ ಅಶ್ರಫ್ ಮೇಲೆ ಹಲ್ಲೆ ನಡೆದಾಗ ಆತ ಓಡಿ ಹೋಗಿದ್ದ, ಆ ವೇಳೆ ಆತನ ಪ್ಯಾಂಟ್ ಇತ್ತು, ಬಳಿಕ ಆತನನ್ನು ತಂದು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದರು, ಅಶ್ರಫ್ ಮೇಲೆ ಹಲ್ಲೆ ನಡೆದಾಗ ಅಲ್ಲಿ ಕ್ರಿಕೆಟ್ ಆಟ ನಡೆಯುತ್ತಿತ್ತು, ಹೆಚ್ಚಿನವರಿಗೆ ಹಲ್ಲೆ ನಡೆದಿರುವುದು ಗೊತ್ತಾಗಿರಲಿಲ್ಲ, ಅಲ್ಲಿದ್ದವರೆಲ್ಲರೂ ಆರೋಪಿಗಳಾಗುವುದಿಲ್ಲ, ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹಿಸಿ ತನಿಖೆ ನಡೆಯುತ್ತಿದೆ, ಪ್ರತಿಯೊಬ್ಬರನ್ನು ವಿಚಾರಣೆ ನಡೆಸುತ್ತಿದ್ದೇವೆ” ಎಂದರು.

“ಕೃತ್ಯ ನಡೆದ ಸ್ಥಳದಲ್ಲಿದ್ದ ನೂರಕ್ಕೂ ಹೆಚ್ಚು ಜನರ ಫೋನ್ ಕಾಲ್ ಮಾಹಿತಿ ಸಂಗ್ರಹಿಸಿ ಸಾಕ್ಷ್ಯ ಕಲೆ ಹಾಕುತ್ತಿದ್ದೇವೆ, 60ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಿದ್ದೇವೆ, ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ ತನಿಖೆ ನಡೆಯುತ್ತಿದೆ, ಪೊಲೀಸರು ಪಾರ್ದರ್ಶಕವಾಗಿ ತನಿಖೆ ನಡೆಸುತ್ತಿದ್ದಾರೆ, ಯಾವುದೇ ಆರೋಪಿಗಳು ತಪ್ಪಿಸಲು ಸಾಧ್ಯವಿಲ್ಲ” ಎಂದರು.
ಆರಂಭದಲ್ಲಿ ಪೊಲೀಸರಿಂದ ತಪ್ಪಾಗಿದೆ ಎಂದ ಅವರು, “ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಆಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಯಾರಲ್ಲಾದರೂ ಸಾಕ್ಷಿಗಳಿದ್ದರೆ ನನಗೆ ತಂದು ಕೊಡಿ. ಸಾಕ್ಷ್ಯ ಇಲ್ಲದೆ ಆರೋಪ ಮಾಡಿದರೆ ಅದು ಕೂಡ ಅಪರಾಧವಾಗಿ ಪರಿಗಣಿಸಬೇಕೆಂಬ ನಿಯಮ ನೂತನ ಭಾರತೀಯ ನ್ಯಾಯ ಸಂಹಿತೆ ಕಾನೂನಿನಲ್ಲಿ ಉಲ್ಲೇಖವಾಗಿದೆ” ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಸರ್ಕಾರದ ಆಡಳಿತ ವಿಫಲ, ನಾನು ರಾಜೀನಾಮೆ ನೀಡಿದರೂ ಅಚ್ಚರಿ ಇಲ್ಲ: ಕಾಂಗ್ರೆಸ್ ಶಾಸಕ ರಾಜು ಕಾಗೆ
“ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಹಾಕುವವರಿಗೆ ಉದ್ದೇಶ ಏನಾದರೂ ಇದೆಯಾ ಎಂದು ನೋಡಬೇಕಾಗುತ್ತದೆ, ಅವರಲ್ಲಿ ಸಾಕ್ಷಿ ಇದ್ದರೆ ಪೊಲೀಸರಿಗೆ ತಂದುಕೊಡಬೇಕು, ನಾನು ಇನ್ನೆರಡು ದಿನ ಕಚೇರಿಯಲ್ಲಿರುತ್ತೇನೆ, ಸಾಕ್ಷಿ ಇದ್ದವರು ತಂದು ಕೊಡಲಿ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಲಿ, ಅದು ಬಿಟ್ಟು ಸೋಷಿಯಲ್ ಮೀಡಿಯಾಗಳ ಪೋಸ್ಟ್ ಮೂಲಕ ಆರೋಪ ಹೊರಿಸುವುದು ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ” ಎಂದರು.
“ಪೊಲೀಸರು ತನಿಖೆಯ ಭಾಗವಾಗಿ ಬೇಕಾದವರನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ, ನೂರು ಸಲ ಬೇಕಾದರೂ ವಿಚಾರಣೆ ನಡೆಸುತ್ತೇವೆ, ಸಜಿತ್ ಶೆಟ್ಟಿ ಮೇಲೆ ಪೊಲೀಸರು ಹಲ್ಲೆ ನಡೆಸಿಲ್ಲ, ನಾನು ಆತ್ಮಹತ್ಯೆ ಮಾಡುತ್ತೇನೆ ಎಂದು ಹೇಳುವುದು ಕೂಡ ಬಿಎನ್‌ಎಸ್ ಕಾಯ್ದೆ ಪ್ರಕಾರ ಅಪರಾಧ” ಎಂದು ಅವರು ಎಚ್ಚರಿಸಿದರು.
“ಕುಡುಪು ಗುಂಪು ಹತ್ಯೆ ಸಂಬಂಧ ಸತತವಾಗಿ ಫೇಸ್‌ಬುಕ್ ಫೋಸ್ಟ್ ಮಾಡಿರುವ ಸುನಿಲ್ ಬಜಿಲಕೇರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದೇವೆ, ಆದರೆ ಅವರು ವಿಚಾರಣೆಗೆ ಹಾಜರಾಗಿಲ್ಲ. ಕೇರಳದಲ್ಲಿರುವುದಾಗಿ ತಿಳಿದುಬಂದಿದೆ. ವಿಚಾರಣೆಗೆ ಹಾಜರಾಗದಿದ್ದರೆ ನಾವೇ ಕರೆದುಕೊಂಡು ಬಂದು ವಿಚಾರಣೆ ನಡೆಸುತ್ತೇವೆ” ಎಂದರು.
ಇದೇ ವೇಳೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಕಮಿಷನರ್, “ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಂಗಳೂರು ಪೊಲೀಸರು ವೈಜ್ಞಾನಿಕ ಮತ್ತು ಪಾರದರ್ಶಕ ತನಿಖೆ ನಡೆಸಿದ್ದು, ಆ ಪ್ರಕರಣ ಎನ್‌ಐಎ ಹಸ್ತಾಂತರ ಆಗಿದೆ. ಅಶ್ರಫ್ ಮತ್ತು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆಯ ಬಗ್ಗೆ ಕೆಲ ದಾಖಲೆಗಳನ್ನು ಪ್ರದರ್ಶನ ಮಾಡಿದರು. ಸಂಶಯ ಇದ್ದವರಿಗೆಲ್ಲ ನಮ್ಮ ತನಿಖೆಯ ದಾಖಲೆ ತೋರಿಸಿದ್ದೇವೆ” ಎಂದು ತಿಳಿಸಿದರು.
‘ಒಳ್ಳೆಯವರ ಮೌನ ಕೆಟ್ಟದ್ದು’ ಎಂದ ಪೊಲೀಸ್ ಆಯುಕ್ತರು, ಕೆಲವರ ಬೊಬ್ಬೆಯಿಂದ ಸಮಸ್ಯೆ ಆಗಿದೆ. ದ್ವೇಷ ಭಾಷಣ ಮಾಡಿದವರಿಗೆ ಮಾಧ್ಯಮದವರು ಕೂಡ ಬುದ್ಧಿ ಹೇಳಬೇಕು. ದ್ವೇಷ ಭಾಷಣ ಮಾಡುವವರಲ್ಲಿಯೂ ಕೂಡ ನೀವು ಯಾಕೆ ಈ ರೀತಿ ಭಾಷಣ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಕೂಡ ಕೇಳಬೇಕು. ಆದರೆ ನೀವು ಕೇಳುತ್ತಿಲ್ಲ” ಎಂದು ಇದೇ ವೇಳೆ ಪತ್ರಕರ್ತರಿಗೂ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಲಹೆ ನೀಡಿದರು.