ಮಂಗಳೂರು ನಗರದ ದೇರೆಬೈಲ್ ಹತ್ತಿರದ ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನಲ್ಲಿ ಶನಿವಾರ ಸಂಜೆ ಕೆಎಸ್‌ಆರ್‌ಟಿಸಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಆವರಣ ಗೋಡೆ, ತಾರಸಿಯ ಮೆಟ್ಟಿಲಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬಸ್ಸಿನ ಮುಂಭಾಗ ಪೂರ್ಣ ನಜ್ಜುಗುಜ್ಜಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ: ಶಕ್ತಿ ಯೋಜನೆ: ಮಹಿಳಾ ಸಬಲೀಕರಣಕ್ಕೆ ಹೊಸ ದಿಕ್ಕು
ಲ್ಯಾಂಡ್‌ಲಿಂಕ್ಸ್–ಬಜಾಲ್‌ಡ್ಡು ನಡುವೆ ಸಂಚರಿಸುವ ನರ್ಮ್ ಸಿಟಿ ಬಸ್ ಸಂಜೆ ಆವರಣದ ಗೋಡೆಗೆ ಡಿಕ್ಕಿಯಾಗಿದೆ. ಲ್ಯಾಂಡ್‌ಲಿಂಕ್ಸ್ ಟೌನ್‌ಶಿಪ್‌ನ ಕೊನೆಯ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ, ಮರು ಪ್ರಯಾಣ ಆರಂಭಿಸಲು ತಿರುವು ಪಡೆಯುವಾಗ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಕ್ಕದ ಮನೆಯ ಆವರಣ ಗೋಡೆ ದಾಟಿ, ಮನೆಯ ತಾರಸಿಗೆ ಹೋಗುವ ಮೆಟ್ಟಿಲಿಗೆ ಡಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಮನೆಯ ಆವರಣ ಗೋಡೆ ಮತ್ತು ತಾರಸಿಯ ಮೆಟ್ಟಿಲಿಗೆ ಹಾನಿಯಾಗಿದೆ. ಈ ಘಟನೆ ವೇಳೆ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮಂಗಳೂರು | ಮುಡಾ ಬಡಾವಣೆ: ನಿವೇಶನಕ್ಕೆ ಅರ್ಜಿ ಆಹ್ವಾನ
ಈ ಘಟನೆ ನಡೆಯುವಾಗ ಬಸ್ಸಿನಲ್ಲಿ ಚಾಲಕ, ನಿರ್ವಾಹಕ ಸೇರಿ ಕೆಲವು ಪ್ರಯಾಣಿಕರು ಇದ್ದರು. ಪ್ರಯಾಣಿಕರಿಗೆ ಯಾವುದೇ ಅಪಾಯ ಉಂಟಾಗಿಲ್ಲ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
