ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎನ್ಎಸ್‌ಯುಐ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸೇರಿ ಇಬ್ಬರು ಮೃತಪಟ್ಟಿರುವ ದುರ್ಘಟನೆ ಮಂಗಳೂರು ನಗರದ ಜಪ್ಪಿನಮೊಗರು ನಡುಮುಗೇರ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.
ಮೃತರನ್ನು ಎನ್ಎಸ್‌ಯುಐ ಮುಖಂಡ ದೇರೆಬೈಲ್ ನಿವಾಸಿ ಓಂ ಶ್ರೀ ಪೂಜಾರಿ (24) ಹಾಗೂ ಕದ್ರಿ ನಿವಾಸಿ ಅಮನ್ ರಾವ್ (23) ಎಂದು ಗುರುತಿಸಲಾಗಿದೆ.
ಓಂ ಶ್ರೀ ಪೂಜಾರಿ ಹಾಗೂ ನಾಲ್ವರು ಸ್ನೇಹಿತರು ನಿನ್ನೆ ತಡರಾತ್ರಿಯಲ್ಲಿ ತಲಪಾಡಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದರು. ಜಪ್ಪಿನಮೊಗರುವಿನಲ್ಲಿ ಚಾಲಕ ಅಮನ್ ರಾವ್ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಏರಿ ಬಳಿಕ ಪಲ್ಟಿಯಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ಹಾಗೂ ಹಿಂಭಾಗದ ಸೀಟ್‌ನಲ್ಲಿದ್ದ ಓಂ ಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಮಂಗಳೂರು | ಚಿಂತಕರು, ಸಾಮಾಜಿಕ ಕಾರ್ಯಕರ್ತರ ಜೊತೆ ಬಿ ಕೆ ಹರಿಪ್ರಸಾದ್ ಚರ್ಚೆ
ಕಾರಿನಲ್ಲಿ ಇನ್ನೂ ಮೂವರಿದ್ದು, ಓರ್ವನ ಬೆನ್ನು ಮೂಳೆ ಮುರಿದರೆ, ಮತ್ತೋರ್ವನ ಕಾಲು ಮುರಿದಿದೆ. ಮತ್ತೋರ್ವ ಅಪಾಯದಿಂದ ಪಾರಾಗಿದ್ದಾನೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.