ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಮಾಯಕ ಮುಸ್ಲಿಮರ ಕೊಲೆಗಳು ಮತ್ತು ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆಗೆ ತೀರ್ಮಾನ ಮಾಡಿರುವುದು ರಾಜ್ಯ ಸರ್ಕಾರ ಮತ್ತು ಕೆಪಿಸಿಸಿಯಲ್ಲಿ ಸಂಚಲನ ಮೂಡಿಸಿದೆ.
ಮುಸ್ಲಿಂ ಮುಖಂಡರ ಸಾಮೂಹಿಕ ರಾಜೀನಾಮೆಗೆ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಪಕ್ಷ ಮನವೊಲಿಸುವ ಕಾರ್ಯಕ್ಕೆ ಇಳಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮುಖಂಡರನ್ನು ಮನವೊಲಿಸಲು ಖುದ್ದು ಸಿಎಂ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದಾರೆ.
ಗುರುವಾರ ಬೆಳಗ್ಗೆ ಸಚಿವ ಜಮೀರ್ ಖಾನ್ ಮತ್ತು ಪರಿಷತ್ ಸದಸ್ಯ ನಾಸಿರ್ ಅಹ್ಮದ್ ಜೊತೆ ಹಿರಿಯ ಕಾಂಗ್ರೆಸ್ ಮುಖಂಡರಾದ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವಿಸ್ತಾರವಾಗಿ ಚರ್ಚೆ ನಡೆಸಿದ್ದಾರೆ. ತಕ್ಷಣವೇ ಉಸ್ತುವಾರಿ ಸಚಿವರ ಜೊತೆ ಮಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿ, ಮುಸ್ಲಿಂ ಸಮುದಾಯ ಮತ್ತು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಬಿ.ಕೆ ಹರಿಪ್ರಸಾದ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸಚಿವ ಜಮೀರ್ ಖಾನ್ ಅವರ ಮೊಬೈಲ್‌ನಲ್ಲಿ ದ.ಕ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಅವರಿಗೆ ಕರೆಮಾಡಿರುವ ಸಿಎಂ ಸಿದ್ದರಾಮಯ್ಯ, ಸಾಮೂಹಿಕ ರಾಜೀನಾಮೆಯಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡದ ಇತ್ತೀಚಿನ ವಿದ್ಯಮಾನಗಳು ಮತ್ತು ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇದೆ, ತಕ್ಷಣವೇ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತಂದು ಶಾಂತಿ ಸ್ಥಾಪಿಸುತ್ತೇವೆ, ದಕ್ಷ ಅಧಿಕಾರಿಗಳನ್ನು ನೇಮಿಸುತ್ತೇವೆ, ಕೋಮುವಾದಿ ಸಮಾಜಘಾತುಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ, ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ, ಸರ್ಕಾರ ನಿಮ್ಮ ಜೊತೆ ಇದೆ, ತಕ್ಷಣವೇ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಬಿ.ಕೆ ಹರಿಪ್ರಸಾದ್ ಅವರನ್ನು ಮಂಗಳೂರಿಗೆ ಕಳಿಸುತ್ತೇನೆ, ನಿಮ್ಮ ಅಹವಾಲುಗಳನ್ನು ಅವರ ಬಳಿ ಹೇಳಿ, ನಿಮ್ಮ ಬೇಡಿಕೆಗಳನ್ನು ಪೂರೈಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಶಾಹುಲ್ ಹಮೀದ್ ಬಳಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದ್ದಾರೆ. ಇದೇ ವೇಳೆ ಮುಸ್ಲಿಂ ಮುಖಂಡರು ಸಾಮೂಹಿಕ ರಾಜೀನಾಮೆಯಿಂದ ಹಿಂದೆ ಸರಿಯಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ಮುಸ್ಲಿಂ ಮುಖಂಡರು ಗುರುವಾರ ಮದ್ಯಾಹ್ನ 2.30ಕ್ಕೆ ಸಾಮೂಹಿಕ ರಾಜೀನಾಮೆಗೆ ತೀರ್ಮಾನ ಮಾಡಿದ್ದು ನಗರದ ಶಾದಿ ಮಹಲ್‌ನಲ್ಲಿ ಸಭೆ ಕರೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಕರೆಮಾಡಿ ನ್ಯಾಯದ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಕೂಡ ಮೂಡಿದೆ.
ಸರ್ಕಾರ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಮತ್ತು ನಗರ ಪೊಲೀಸ್ ವಿಭಾಗದಲ್ಲಿ ಶೀಘ್ರವೇ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ. ಒಂದು ವಾರದೊಳಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಎತ್ತಂಗಡಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದನ್ನು ಓದಿದ್ದೀರಾ? ಮಂಗಳೂರಿಗೆ ತೆರಳಲು ನನಗೆ ಸಿಎಂ ಸೂಚನೆ ನೀಡಿಲ್ಲ, ಚರ್ಚಿಸಿದ್ದಾರಷ್ಟೇ: ಬಿ ಕೆ ಹರಿಪ್ರಸಾದ್
ದಕ್ಷ ಐಪಿಎಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಡುಪಿ ಎಸ್.ಪಿ ಕೆ.ಅರುಣ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರೆತರುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಅರುಣ್ ಅವರ ವರ್ಗಾವಣೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ನಾಯಕರು ವಿರೋಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಮತ್ತೊಬ್ಬರು ದಕ್ಷ ಐಪಿಎಸ್ ಅಧಿಕಾರಿಯ ಹುಡುಕಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.
