ಕಳೆದ ಮೂರ್ನಾಲ್ಕು ತಿಂಗಳಿನಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವದ ತೀವ್ರತೆ ಹೆಚ್ಚಾಗಿದೆ. ಜಿಲ್ಲಾಡಳಿತದ ಕಠಿಣ ನಿಯಮಗಳಿಂದ ಕಟ್ಟಡ ಮತ್ತು ನಿರ್ಮಾಣ ರಂಗಕ್ಕೆ ತೀವ್ರವಾದ ತೊಂದರೆಯಾಗಿದೆ ಎಂದು ಕಾರ್ಮಿಕರ ಫೆಡರೇಶನ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಯಾದವ ಶೆಟ್ಟಿ ಹೇಳಿದ್ದಾರೆ
ಸೋಮವಾರ ನಗರದ ಮಿನಿ ವಿಧಾನ ಸೌಧದ ಮುಂಭಾಗ ಸಿಐಟಿಯು ಮತ್ತು ಎಐಟಿಯುಸಿ ನೇತೃತ್ವದ ಕಟ್ಟಡ ಕಾರ್ಮಿಕರ ಸಂಘಟನೆಯ ವತಿಯಿಂದ ನಡೆದ ಬೃಹತ್ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇದನ್ನೂ ಓದಿ: ಎಫ್‌ಎಸ್ಎಲ್ ವರದಿ ಬರುವವರೆಗೆ ಧರ್ಮಸ್ಥಳದಲ್ಲಿ ಶೋಧ ಕಾರ್ಯ ಸ್ಥಗಿತ: ಗೃಹ ಸಚಿವ ಡಾ. ಜಿ ಪರಮೇಶ್ವರ್
ಜಿಲ್ಲಾಡಳಿತದ ನೀತಿಯಿಂದ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಈಗ ಸಂಪೂರ್ಣವಾಗಿ ಬೀದಿ ಪಾಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿದೆ. ಅಕ್ರಮ ದಂಧೆ ತಡೆಯುವ ಕ್ರಮವು ಸ್ವಾಗತಾರ್ಹವಾಗಿದ್ದರೂ ಅದರಿಂದ ಸೃಷ್ಟಿಯಾಗಿರುವಂತಹ ಇತರೆ ಸಮಸ್ಯೆಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಪರಿಹಾರ ಇಲ್ಲದಿರುವುದು ಖಂಡನೀಯ ಎಂದರು.
ಕಟ್ಟಡ ಕಾರ್ಮಿಕರ ರಂಗದ ಕೆಂಪು ಕಲ್ಲಿನ ಕೋರೆ ಪರವಾನಿಗೆ ಪದ್ಧತಿಯಲ್ಲಿ ಸರಳೀಕರಣ ಮತ್ತು ನ್ಯಾಯಯುತವಾಗಿರಲಿ. ಕೇರಳದ ಮಾದರಿಯಲ್ಲಿ ರಾಜಧನ ಪದ್ಧತಿ ಜಿಲ್ಲೆಯಲ್ಲಿ ಜಾರಿಯಾಗಲಿ, ಕರಾವಳಿಗೆ ಮರಳು ನೀತಿ ಜಾರಿಯಾಗಲು ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ ಖಜಾಂಚಿ ಯೋಗೀಶ್ ಜಪ್ಪಿನಮೊಗರು, ಮುಂದಾಳುಗಳಾದ ಜನಾರ್ದನ ಕುತ್ತಾರ್, ಶಂಕರ ಮೂಡಬಿದರೆ, ಚಂದ್ರಹಾಸ ಪಿಲಾರ್, ವಿಶ್ವನಾಥ ಸುಳ್ಯ, ನೋಣಯ್ಯ ಗೌಡ ಕೈಕಂಭ, ರಾಮಚಂದ್ರ ಪಜೀರು, ಕಟ್ಟಡ ಮತ್ತು ಕೋರೆ ಕಾರ್ಮಿಕರ ಸಂಘ ಎಐಟಿಯುಸಿ ಮುಂದಾಳುಗಳಾದ ಎಚ್.ವಿ.ರಾವ್, ಕರುಣಾಕರ ಮಾರಿಪಳ್ಳ, ಶೇಖರ್ ಬಿ, ಸುರೇಶ್ ಬಿ, ವಿ.ಕುಕ್ಯಾನ್ ಮುಂತಾದವರು ಇದ್ದರು.
