ಮಂಗಳೂರು ನಗರದಲ್ಲಿ 2022ರಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾದ ಸೈಯದ್ ಯಾಸಿನ್ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ
ಈ ಘಟನೆ ಸಂಬಂಧಿಸಿದಂತೆ ಇ.ಡಿ ಪಿಎಂಎಲ್‌ಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. 2022ರ ನ.19ರಂದು ಸಂಜೆ ಮಂಗಳೂರಿನ ಕಂಕನಾಡಿ ಸಮೀಪ ಸ್ಫೋಟ ಸಂಭವಿಸಿತ್ತು. ಕುಕ್ಕರ್ ಬಾಂಬ್‌ನ್ನು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಆರೋಪಿ ಮಹಮ್ಮದ್ ಶಾರೀಕ್ ಗಂಭೀರವಾಗಿ ಗಾಯಗೊಂಡಿದ್ದ. ಆಟೋ ರಿಕ್ಷಾ ಚಾಲಕ ಕೂಡ ಈ ವೇಳೆ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಲಾಗಿತ್ತು.
ಇದನ್ನೂ ಓದಿ: ಧರ್ಮಸ್ಥಳ | ಸುಳ್ಳು ಹೇಳಿ ಸಿಕ್ಕಿಬಿದ್ದ ‘ಸುವರ್ಣ ನ್ಯೂಸ್’ ವರದಿಗಾರರು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನ ಭಯೋತ್ಪಾದಕರ ಗುರಿಯಾಗಿತ್ತು. ಆದರೆ ಅಲ್ಲಿಗೆ ಸಾಗಿಸುವ ಮೊದಲೇ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಟೈಮರ್‌ನ್ನು 90 ನಿಮಿಷಗಳ ಬದಲಿಗೆ 9 ಸೆಕೆಂಡುಗಳಿಗೆ ಹೊಂದಿಸಿದ್ದು ಇದಕ್ಕೆ ಕಾರಣವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು. ಇಡಿ ಕೂಡ ತನಿಖೆ ಆರಂಭಿಸಿತ್ತು. ಐಸಿಸ್‌ನ ಹ್ಯಾಂಡ್ಲರ್‌ಗಳಿಗೆ ಆನ್‌ಲೈನ್‌ನಲ್ಲಿ ಟೆಲಿಗ್ರಾಂ ಮೂಲಕ ತರಬೇತಿ ನೀಡಲಾಗುತ್ತಿತ್ತು. ಪ್ರಮುಖ ಆರೋಪಿ ಮಹಮದ್ ಶಾರೀಕ್ ಅಲಿಯಾಸ್ ಪ್ರೇಮ್ ರಾಜ್ ಇತರೆ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ವರ್ಗಾವಣೆ ಮಾಡುತ್ತಿದ್ದ.
ರೂ.2.68 ಲಕ್ಷ ಹಣವನ್ನು ಕ್ರಿಪ್ಟೋ ಕರೆನ್ಸಿ ಏಜೆಂಟ್‌ಗಳ ಮೂಲಕ ಶಾರೀಕ್ ತಲುಪಿಸಿದ್ದ. ಈ ಹಣದ ಮೂಲಕ ಆನ್ಲೈನ್‌ನಲ್ಲಿ ಐಇಡಿ ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿ ಖರೀದಿಸಲಾಗಿತ್ತು. ಕರ್ನಾಟಕದ ಮೈಸೂರು ಕೇರಳ ತಮಿಳುನಾಡಿನಲ್ಲೂ ಐಇಡಿ ಬಾಂಬ್ ಇಡಲು ಯೋಜನೆಯನ್ನು ರೂಪಿಸಲಾಗಿತ್ತು. ಪ್ರಮುಖ ಆರೋಪಿ ಮಾಜ್, ಮುನೀರ್ ಕ್ರಿಪ್ಟೋ ಕರೆನ್ಸಿಯನ್ನು ಏಜೆಂಟ್‌ರ ಮೂಲಕ ಮಹಮ್ಮದ್ ಶಾರೀಕ್‌ಗೆ ತಲುಪಿಸಿದ್ದ ಎಂದು ಜಾರಿ ನಿರ್ದೇಶನಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.