ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೆಸರಿನಲ್ಲಿ ಬಿಜೆಪಿ ನಾಯಕರು ಕರಾಳ ದಿನ ಆಚರಿಸುವ ಮೂಲಕ ಅವರಿಗೆ ಅವಮಾನ ಮಾಡುತ್ತಿದ್ದಾರೆ. ಬಿಜೆಪಿಯ ವಿರೋಧ ರಾಜಕೀಯ ಪ್ರೇರಿತವಾಗಿದ್ದು, ದ.ಕ. ಜಿಲ್ಲೆಯ ಜನರ ಮೇಲೆ ಇಂದಿರಾ ಗಾಂಧಿಯ ಋಣವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ತುರ್ತು ಪರಿಸ್ಥಿತಿಯಿಂದ ವಿಪಕ್ಷದವರಿಗೆ ತೊಂದರೆ ಆಗಿರಬಹುದು. ಆದರೆ ದುರ್ಬಲ ವರ್ಗದವರಿಗೆ ಯಾರಿಗೂ ಯಾವತ್ತಿಗೂ ಯಾವ ತೊಂದರೆ ಆಗಿಲ್ಲ. ಜೀತ ಪದ್ಧತಿ, ಋಣಭಾರ ಮುಕ್ತಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಫಲಾನುಭವಿಗಳು ದ.ಕ. ಜಿಲ್ಲೆಯವರು ಎಂಬುದು ವಾಸ್ತವ” ಎಂದರು.
“ಇಂದಿರಾ ಗಾಂಧಿಯವರ ಭೂ ಮಸೂದೆ ಕಾನೂನು ದ.ಕ. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆ. ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದಲೂ ಲಾಭವಾಗಿದೆ. ಇಂದಿರಾ ಗಾಂಧಿ ಕಾಲದಲ್ಲಿ ಜಿಲ್ಲೆಯ ಜನರಿಗೆ 20 ಅಂಶಗಳ ಕಾರ್ಯಕ್ರಮ, ನಿವೇಶನ, ದಖಾಸ್ತು ಭೂಮಿ ಹೀಗೆ ಹಲವು ಕಾರ್ಯಕ್ರಮ ಬಡವರ ಸಬಲೀಕರಣಕ್ಕೆ ಸಹಾಯವಾಗಿದೆ ಎಂಬುದು ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವವರಿಗೆ ನೆನಪಿಸಬೇಕಾಗಿದೆ. ತುರ್ತು ಪರಿಸ್ಥಿತಿಯ ಬಳಿಕವೂ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಮತಗಳಿಂದ ಜಯಗಳಿಸಿದೆ. ಇದು ಇಂದಿರಾ ಗಾಂಧಿಯವರು ಮಾಡಿದ ಜನಪರ ಕಾರ್ಯಗಳನ್ನು ಜಿಲ್ಲೆಯ ಜನತೆ ಒಪ್ಪಿಕೊಂಡಿದ್ದಾರೆ ಎಂದು ಸಾಬೀತು ಮಾಡುತ್ತದೆ. ಇಂದಿರಾ ಗಾಂಧಿರವರು ದೇಶದ ಸಮಗ್ರತೆಗಾಗಿ ಪ್ರಾಣ ಕೊಟ್ಟ ಮಹಾನ್ ವ್ಯಕ್ತಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತನಾಗಿ ಇಂದಿರಾ ಗಾಂಧಿಯವರ ಪ್ರಗತಿಪರ ಕಾರ್ಯಕ್ರಮಗಳನ್ನು ನೆನಪಿಸಿಕೊಳ್ಳುವುದು ನನ್ನ ಜವಾಬ್ದಾರಿ” ಎಂದರು.
ಇದನ್ನೂ ಓದಿ: ಮಂಗಳೂರು | ಕ್ಷಣಿಕ ಸುಖಕ್ಕೆ ಜೀವನ ಹಾಳು ಮಾಡಿಕೊಳ್ಳಬೇಡಿ: ಡಿಸಿ ದರ್ಶನ್
“ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಜರಾತ್ ನರಮೇಧ, ಗೋಧ್ರಾ ಹತ್ಯಾಕಾಂಡ, ಭೀಮಾ ಕೊರೆಗಾಂವ್ ಪ್ರಕರಣ, ಈ.ಡಿ.ಯನ್ನು ಬಳಸಿಕೊಂಡು ವಿಪಕ್ಷ ನಾಯಕರನ್ನು ಜೈಲಿಗೆ ಹಾಕುವುದು, ಪತ್ರಕರ್ತರ ಮೇಲಿನ ದಬ್ಬಾಳಿಕೆ ಮಾಡಿರುವ ಬಿಜೆಪಿ ನಾಯಕರಿಗೆ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ” ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಅಪ್ಪಿಲತಾ, ಪೃಥ್ವಿರಾಜ್, ಅಶೋಕ್ ಡಿ.ಕೆ., ಅಬ್ಬಾಸ್ ಅಲಿ, ಜಯಶೀಲ ಅಡ್ಯಂತಾಯ, ಜೆ. ಸಲೀಂ, ಇಬ್ರಾಹೀಂ ನವಾಝ್, ಸುಹಾನ್ ಆಳ್ವ ದಿನೇಶ್ಯುಮಾರ್, ನಿತ್ಯಾನಂದ ಶೆಟ್ಟಿ, ಶಬೀರ್, ಸುನೀಲ್ ಬಜಿಲಕೇರಿ, ಪ್ರಕಾಶ್ ಸಾಲ್ಯಾನ್ ಸೇರಿದಂತೆ ಮತ್ತಿತರು ಇದ್ದರು.
