ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ನೀಡಲಾಗಿದ್ದ ಆಹಾರ ಸೇವಿಸಿ ಸುಮಾರು 45 ಕೈದಿಗಳು ಅಸ್ವಸ್ಥರಾಗಿದ್ದಾರೆ. ಅವರಿಗೆ ಫೈಡ್ ಪಾಯಿಸನ್ ಆಗಿದೆ ಎಂದು ಹೇಳಲಾಗಿದೆ. ಅಸ್ವಸ್ಥರಾಗಿರುವ ವಿಚಾರಣಾಧೀನ ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಜೈಲಿನಲ್ಲಿ ಬುಧವಾರ ಸಂಜೆ ನೀಡಲಾಗಿದ್ದ ಆಹಾರ ಸೇವಿಸಿದ ಬಳಿಕ, ಹಲವಾರು ವಿಚಾರಣಾಧೀನ ಕೈದಿಗಳು ಹೊಟ್ಟೆ ನೋವಿಗೆ ತುತ್ತಾಗಿದ್ದಾರೆ. ಹಲವರಿಗೆ ವಾಂತಿಯಾಗಿದ್ದು, ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಕೈದಿಗಳನ್ನು ಕಾರಾಗೃಹದ ಆ್ಯಂಬುಲೆನ್ಸ್, ಪೊಲೀಸ್ ವಾಹನಗಳಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕಾರಾಗೃಹದಲ್ಲಿ ಸುಮಾರು 350 ಮಂದಿ ಕೈದಿಗಳಿದ್ದಾರೆ. ನಾನಾ ಬ್ಯಾರೆಕ್‌ಗಳಲ್ಲಿದ್ದ ಕೈದಿಗಳು ಅಸ್ವಸ್ಥಗೊಂಡಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥಗೊಂಡಿದ್ದ ಕೈದಿಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಕಾರಾಗೃಹಕ್ಕೆ ತೆರಳಿ, ಕೈದಿಗಳಿಗೆ ನೀಡಲಾಗಿದ್ದ ಆಹಾರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ ಎಂದು ವರದಿಯಾಗಿದೆ.
ಆಹಾರದಲ್ಲಿ ಕಲಬೆರಕೆಯಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.