ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅರಂತೋಡು ಬಳಿಯ ಉದಯನಗರ ಸಮೀಪ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಅಪಘಾತದಲ್ಲಿ 20ಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರಿನಿಂದ ಮಡಿಕೇರಿ ಹಾಗೂ ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಅರಂತೋಡು ಬಳಿಯ ತಿರುವಿನಲ್ಲಿ ಭೀಕರ ಅಪಘಾತ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಕುಶಾಲನಗರದ ಗುಡ್ಡೆಹೊಸೂರು ನಿವಾಸಿ ಭಾರತಿ(50) ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಮಂಗಳೂರು | ಬ್ಯೂಟಿ ಸಲೂನ್ ಮೇಲೆ ಪೊಲೀಸ್ ದಾಳಿ; ಲೈಸೆನ್ಸ್ ರದ್ದು
ಅಪಘಾತದಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.