ಮಂಗಳೂರಿನಲ್ಲಿ ಕೊಲೆಯಾದ ಸುಹಾಸ್ ಶೆಟ್ಟಿಯನ್ನು ಹಿಂದೂ ನಾಯಕ ಎಂದು ವೈಭವೀಕರಿಸುತ್ತಿರುವ ಬಿಜೆಪಿಯವರು, ಅಧಿಕಾರದಲ್ಲಿದ್ದಾಗ ಸುಹಾಸ್ ಮೇಲೆ ರೌಡಿಶೀಟರ್ ತೆರೆದಿದ್ದೇ ಅವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಸುಹಾಸ್ ಶೆಟ್ಟಿ ಹಿಂದೂ ನಾಯಕನಾಗಿದ್ದರೆ ಆತನ ಮೇಲೆ ರೌಡಿಶೀಟರ್ ತೆರೆಯಲು ಬಿಜೆಪಿ ಸರ್ಕಾರ ಅವಕಾಶ ಕೊಟ್ಟಿದ್ಯಾಕೆ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರವೇ ರೌಡಿಶೀಟರ್ ತೆರೆದು ಈಗ ಆತನಿಗೆ ಹಿಂದೂ ನಾಯಕನ ಪಟ್ಟ ಕಟ್ಟಿದ್ದಾರೆ. ಅಂದು ಹಿಂದೂ ಯುವಕನ ಮೇಲೆ ರೌಡಿಶೀಟರ್ ತೆರೆಯುವಾಗ ತುಟಿ ಬಿಚ್ಚದ ಶಾಸಕ ಹರೀಶ್ ಪೂಂಜಾ, ಈಗ ಹಿಂದೂ ನಾಯಕನ ಕೊಲೆ ಎಂದು ಪ್ರಕರಣವನ್ನು ವೈಭವೀಕರಣ ಮಾಡುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ” ಎಂದು ಗುಡುಗಿದರು.
“ಸುಹಾಸ್ ಶೆಟ್ಟಿ ಮೇಲೆ ಐದು ಕ್ರಿಮಿನಲ್ ಪ್ರಕರಣಗಳಿವೆ. ಕೀರ್ತಿ ಎಂಬ ಹಿಂದೂ ಯುವಕನನ್ನು ಕೊಂದಿರುವ ಕೇಸ್ ಕೂಡ ಇದೆ. ಕೊಲೆಯಾದ ದಲಿತ ಯುವಕ ಹಿಂದೂ ಅಲ್ಲವೇ? ಹಿಂದೂಗಳನ್ನು ಕೊಂದವನನ್ನು ಹಿಂದೂ ಕಾರ್ಯಕರ್ತ ಎಂದು ವೈಭವೀಕರಿಸುವುದು ಸರಿಯಲ್ಲ. ಬಿಜೆಪಿಯವರು ಕೊಲೆಗಳಾಗುವುದನ್ನು ಕಾಯುತ್ತಿರುತ್ತಾರೆ. ಅಧಿಕಾರ ದಾಹಕ್ಕಾಗಿ ಕೋಮು ಗಲಾಟೆಗಳಿಗೆ ಪ್ರಚೋದನೆ ನೀಡುತ್ತಾರೆ. ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದು ದುರುದ್ದೇಶಕ್ಕೆ ಬಳಸಿಕೊಂಡಿದ್ದು ಇದೇ ಬಿಜೆಪಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಹಿಂದೂಸ್ಥಾನದಲ್ಲಿ ಹಿಂದೂಗಳಿಗೆ, ಹಿಂದೂ ಯುವಕರಿಗೆ ರಕ್ಷಣೆ ಇಲ್ಲʼ ಎಂದಿರುವ ಪೇಜಾವರ ಶ್ರೀಗಳಿಗೆ ತಿರುಗೇಟು ನೀಡಿದ ಮಂಜುನಾಥ್ ಭಂಡಾರಿ, ಹಿಂದೂಗಳ ರಕ್ಷಣೆ ಮಾಡುತ್ತೇವೆ ಎಂದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಅವರ ಸರ್ಕಾರ ಇರುವಾಗ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದಾದರೆ ಶ್ರೀಗಳು ಮೋದಿಯವರ ರಾಜೀನಾಮೆ ಕೇಳಲಿ. ಪೇಜಾವರ ಶ್ರೀಗಳು ಮತ್ತೊಮ್ಮೆ ಭಗವದ್ಗೀತೆ ಓದಬೇಕು ಎಂದು ಮನವಿ ಮಾಡುತ್ತೇನೆ. ಕ್ಷುಲ್ಲಕ ಹೇಳಿಕೆ ನೀಡುವುದು ಹಾಗೂ ರಾಜಕೀಯ ಮಾಡುವುದನ್ನು ಬಿಡಬೇಕು” ಎಂದರು.
ಇದನ್ನೂ ಓದಿ: ಮಂಗಳೂರು | ಮುಸ್ಲಿಂ ಯುವಕನ ಗುಂಪು ಹತ್ಯೆ: ಮತ್ತೆ ಐವರ ಬಂಧನ; ಮೃತದೇಹ ಕೇರಳಕ್ಕೆ ಕೊಂಡೊಯ್ದ ಕುಟುಂಬಸ್ಥರು
“ಕೊಲೆಗಳು ಖಂಡನೀಯ, ನಿಷ್ಪಕ್ಷಪಾತ ತನಿಖೆ ನಡೆದು ಮತೀಯ ಕೊಲೆಗಳ ಹಿಂದಿನ ಶಕ್ತಿಗಳನ್ನು ಗುರುತಿಸಿ ಶಿಕ್ಷಿಸಬೇಕು. ಯಾವ ಒತ್ತಡಕ್ಕೂ ಮಣಿಯದೆ ಪೊಲೀಸರು ತನಿಖೆ ನಡೆಸಬೇಕು. ಕೊಲೆಗಳು ನಡೆದಾಗ ಯಾರೂ ಕೋಮು ಪ್ರಚೋದನೆ ಮಾಡಬಾರದು” ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಪದ್ಮರಾಜ್ ಪೂಜಾರಿ, ಮಿಥುನ್ ರೈ, ರಕ್ಷಿತ್ ಶಿವರಾಂ, ಕೆಪಿಸಿಸಿ ಕಾರ್ಯದರ್ಶಿ ಜಿ.ಎ ಬಾವ, ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆನ್ ಪಿಂಟೋ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.