ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕುಡುಪುವಿನಲ್ಲಿ 2025ರ ಏಪ್ರಿಲ್ 27ರಂದು ನಡೆದಿದ್ದ ಗುಂಪು ಹತ್ಯೆಯಲ್ಲಿ ಕೊಲೆಗೀಡಾಗಿದ್ದ ಕೇರಳದ ಮುಸ್ಲಿಂ ಯುವಕ ಅಶ್ರಫ್ ಅವರ ಕುಟುಂಬಕ್ಕೆ ವೈಯಕ್ತಿಕ ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಸ್ಪೀಕರ್ ಯು.ಟಿ.ಖಾದರ್ ಅವರು ಪರಿಹಾರದ ಮೊತ್ತವನ್ನು ಕುಟುಂಬಸ್ಥರಿಗೆ ವಿತರಿಸಿದರು.
ಗುಂಪು ಹತ್ಯೆಗೆ ಸಂಬಂಧಿಸಿದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇರಳ ಸಂಸದ ಕೆ.ಸಿ.ವೇಣುಗೋಪಾಲ್ ರವರ ಕೋರಿಕೆ ಹಾಗೂ ಸೂಚನೆಯ ಮೇರೆಗೆ ಸಭಾಧ್ಯಕ್ಷ ಯು.ಟಿ.ಖಾದರ್,ಸಚಿವ ಜಮೀರ್ ಅಹ್ಮದ್ ಖಾನ್, ಎಐಸಿಸಿ ಕಾರ್ಯದರ್ಶಿಗಳಾದ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾಂಗ್ರೆಸ್ ಮುಖಂಡರಾದ ಜಿ ಎ ಬಾವ ಹಾಗೂ ಮಂಜೇಶ್ವರ ಶಾಸಕರಾದ ಎ ಕೆ ಎಂ ಅಶ್ರಫ್ ಅವರು ಗುಂಪು ಹಲ್ಲೆಯಲ್ಲಿ ಹತ್ಯೆಗೀಡಾದ ಅಶ್ರಫ್ ರವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಿತು.

ಚರ್ಚೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆಸಲು ಸರಕಾರದ ವತಿಯಿಂದ ವಿಶೇಷ ಅಭಿಯೋಜಕರನ್ನು ನೇಮಿಸಲು ತೀರ್ಮಾನಿಸಲಾಯಿತು. ಅದೇ ರೀತಿ ಗುಂಪು ಹತ್ಯಾ ಕಾಯ್ದೆ ಪ್ರಕಾರ ಹತ್ಯೆಯಾದ ಅಶ್ರಫ್ ರವರ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಒದಗಿಸುವ ಕುರಿತಾಗಿ ಕೂಡಾ ಚರ್ಚೆ ನಡೆಸಲಾಯಿತು.
ಆ ಬಳಿಕ ಮಾನವೀಯತೆಯ ನೆಲೆಯಲ್ಲಿ ತಮ್ಮ ವೈಯುಕ್ತಿಕ ಖಾತೆಗಳಿಂದ ಸಚಿವ ಜಮೀರ್ ಅಹ್ಮದ್ ಖಾನ್ ಹತ್ತು ಲಕ್ಷ ಹಾಗೂ ಯು.ಟಿ.ಖಾದರ್ ಐದು ಲಕ್ಷ ರೂಪಾಯಿಯ ಪರಿಹಾರದ ಮೊತ್ತವನ್ನು ಅಶ್ರಫ್ ಕುಟುಂಬಸ್ಥರಿಗೆ ವಿತರಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು ಗುಂಪು ಹತ್ಯೆ | ಸತ್ಯಶೋಧನಾ ವರದಿ ಬಿಡುಗಡೆ; 2 ತಿಂಗಳಾದರೂ ಸರ್ಕಾರಿ ವಕೀಲರನ್ನೇ ನೇಮಿಸದ ರಾಜ್ಯ ಸರ್ಕಾರ!
ಈ ಸಂದರ್ಭದಲ್ಲಿ ಅಶ್ರಫ್ ಕುಟುಂಬಸ್ಥರೊಂದಿಗೆ ಮಲಪ್ಪುರಂ ಕಾಂಗ್ರೆಸ್ ಮುಖಂಡರಾದ ನಾಸಿರ್ ವೆಂಗರ, ಮಂಗಳೂರಿನ ಮುಸ್ಲಿಂ ಸಮುದಾಯದ ಮುಖಂಡರಾದ ಮಾಜಿ ಮೇಯರ್ ಅಶ್ರಫ್, ಜಿ ಎ ಬಾವಾ, ಜಲೀಲ್ ಕೃಷ್ಣಾಪುರ ಮುಂತಾದವರು ಉಪಸ್ಥಿತರಿದ್ದರು.
