ಮಂಗಳೂರಿನ ಕುಡುಪು ಎಂಬಲ್ಲಿ ವಲಸೆ ಕಾರ್ಮಿಕನೋರ್ವನನ್ನು ಸುಮಾರು 30ಕ್ಕೂ ಅಧಿಕ ಮಂದಿಯ ಗುಂಪೊಂದು ಕೈಗೆ ಸಿಕ್ಕಿದ್ದನ್ನೆಲ್ಲ ಬಳಸಿಕೊಂಡು ಹತ್ಯೆ ಮಾಡಿದ್ದ ಘಟನೆಯಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ವಿವರ ಕೊನೆಗೂ ಪತ್ತೆಯಾಗಿದೆ.
ಮೃತಪಟ್ಟ ವ್ಯಕ್ತಿಯ ಸುದ್ದಿ, ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ನಂತರ ಗುರುತು ಪತ್ತೆಯಾಗಿದ್ದು, ಮೃತಪಟ್ಟ ವಲಸೆ ಕಾರ್ಮಿಕ ಕೇರಳದ ವಯನಾಡ್ ಜಿಲ್ಲೆಯ ನಿವಾಸಿ ಎಂದು ಕೇರಳದ ‘ಮೀಡಿಯಾ ವನ್’ ಚಾನೆಲ್ ವರದಿ ಮಾಡಿದೆ.

ಮೃತಪಟ್ಟ ವ್ಯಕ್ತಿಯನ್ನು ಕುಂಞಿದ್ದುಕ್ಕಾ ಎಂಬುವವರ ಪುತ್ರ ಅಶ್ರಫ್ ಪುಲ್ಪಲ್ಲಿ ಎಂದು ಗುರುತಿಸಲಾಗಿದೆ. ಈತ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿ ಗೆದ್ದಿದ್ದ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಪುಲ್ಪಲ್ಲಿ ನಿವಾಸಿ ಎಂದು ತಿಳಿದು ಬಂದಿದೆ.
ಈದಿನ ಡಾಟ್ ಕಾಮ್ ಮೃತಪಟ್ಟ ವ್ಯಕ್ತಿಯ ಸಹೋದರ ಹಮೀದ್ ಎಂಬುವವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ‘ಫೋಟೋದಲ್ಲಿರುವ ವ್ಯಕ್ತಿ ನನ್ನ ಸಹೋದರ ಅಶ್ರಫ್’ ಎಂದು ಖಚಿತಪಡಿಸಿದ್ದಾರೆ.
“ಫೋಟೋ ನೋಡಿದಾಗ ನಮ್ಮ ಸಹೋದರ ಎಂದು ಗೊತ್ತಾಗಿದೆ. ಹೊಟೇಲ್‌ಗಳಲ್ಲಿ ಕಾರ್ಮಿಕರಾಗಿ ದುಡಿಯುವ ಹವ್ಯಾಸ ಇತ್ತು. ದುಡಿದು ಸಂಪಾದಿಸುವ ಹಣವನ್ನು ಹಲವರಿಗೆ ಹಂಚುವ ಹವ್ಯಾಸವಿತ್ತು. ಅವರಿಗೆ 38 ವರ್ಷ ವಯಸ್ಸು. ಕಳೆದ ಎರಡು ತಿಂಗಳ ಹಿಂದೆ ನಮ್ಮ ತಾಯಿಯನ್ನು ನೋಡಲೆಂದು ಊರಿಗೆ ಬಂದಿದ್ದರು. ಆ ಬಳಿಕ ಎಲ್ಲಿಗೆ ಹೋಗಿದ್ದರು ಎಂಬ ಮಾಹಿತಿ ಇರಲಿಲ್ಲ. ಮಂಗಳೂರಿನಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬಗ್ಗೆ ಸುದ್ದಿಯನ್ನು ಗಮನಿಸಿದಾಗ ನಮಗೆ ವಿಷಯ ಗೊತ್ತಾಗಿದೆ. ಈ ಬಗ್ಗೆ ಮಂಗಳೂರು ಪೊಲೀಸರನ್ನು ಸಂಪರ್ಕಿಸಿದ್ದೇವೆ. ಇವತ್ತು ರಾತ್ರಿಯೇ ಮೃತದೇಹವನ್ನು ನೋಡಿ ದೃಢೀಕರಿಸಲು ಮಂಗಳೂರಿಗೆ ನಮ್ಮ ಕುಟುಂಬದ ಸದಸ್ಯರು ಪ್ರಯಾಣ ಬೆಳೆಸುತ್ತಿದ್ದೇವೆ. ರಾತ್ರಿ 2 ಗಂಟೆ ಆಸುಪಾಸಿನಲ್ಲಿ ಮಂಗಳೂರಿಗೆ ತಲುಪಲಿದ್ದೇವೆ” ಎಂದು ಸಂತ್ರಸ್ತ ಯುವಕ ಅಶ್ರಫ್ ಅವರ ಸಹೋದರ ಹಮೀದ್ ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.
ಆದರೆ, ಕುಡುಪು ಗುಂಪು ಹತ್ಯೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಂಗಳೂರು ಪೊಲೀಸರು ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.