“ಮಂಗಳೂರಿನ ಕುಡುಪು ಬಳಿ ನಡೆದ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿ ಪಾಕ್ ಪರ ಘೋಷಣೆ ಕೂಗಿದ್ದರ ಬಗ್ಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲ. ಹಾಗಾಗಿ, ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ” ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಕುಡುಪು ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ ಮೂವರು ಪೋಲಿಸರನ್ನು ಅಮಾನತು ಮಾಡಲಾಗಿದೆ. ಸ್ಥಳೀಯ ಪೊಲೀಸರು ಮೊದಲು ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿದ್ದರು. ತನಿಖೆ ನಡೆಸಿದ ನಂತರ ಇದು ಕೊಲೆ ಎಂದು ಧೃಡಪಟ್ಟಿದೆ. ಮೂವರು ಪೋಲಿಸರನ್ನು ಕರ್ತವ್ಯದಲ್ಲಿ ಲೋಪದ ಆರೋಪದಡಿಯಲ್ಲಿ ಅಮಾನತು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.
ಕರ್ತವ್ಯಲೋಪದ ಮೇರೆಗೆ ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್ , ಹೆಡ್ ಕಾನ್ಸ್ ಟೇಬಲ್ ಚಂದ್ರ.ಪಿ , ಕಾನ್ಸಟೇಬಲ್ ಯಲ್ಲಾಲಿಂಗ ಮೂವರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರೆಸುತ್ತಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಗೋಕಾಕ್‌ನಿಂದ ಒಬ್ಬ ಆರೋಪಿಯನ್ನು ಗುರುವಾರ ಬಂಧಿಸಿದ್ದೇವೆ. ಒಟ್ಟು ಈಗಾಗಲೇ 20 ಮಂದಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವರಿಗೆ ಹುಡುಕಾಟ ನಡೆಸುತ್ತಿದ್ದೇವೆ. ಘಟನಾ ಸ್ಥಳದಲ್ಲಿದ್ದ 15 ಜನರಿಗೆ ನೋಟಿಸ್ ಜಾರಿ ಮಾಡಿದ್ದೇವೆ” ಎಂದರು.
ಗುಂಪು ಹತ್ಯೆಗೆ ಏನು ಕಾರಣ ಎಂದು ಕಮಿಷನರ್ ಅವರಲ್ಲಿ ಪತ್ರಕರ್ತರು ಕೇಳಿದಾಗ, “ನಿರ್ದಿಷ್ಟ ಕಾರಣ ಸಿಕ್ಕಿಲ್ಲ. ಈ ಬಗ್ಗೆ ಕಣ್ಣಾರೆ ಕಂಡಿರುವ ಸಾಕ್ಷಿಗಳು ಈವರೆಗೆ ಸಿಕ್ಕಿಲ್ಲ. ಸದ್ಯ ಆರೋಪಿಗಳು ಹಾಗೂ ಕೆಲವು ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರಕಾರ, ಸಚಿನ್ ಅವರು ಮೊದಲು ಅಶ್ರಫ್‌ಗೆ ಯಾಕೆ ಹೊಡೆಯುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ನನ್ನ ಸ್ನೇಹಿತ ಒಬ್ಬನಿಗೆ ಹೊಡೆಯುತ್ತಿದ್ದಾನೆ ಅಂತ ಅವರೂ ಕೂಡ ಗುಂಪಿನಲ್ಲಿ ಸೇರಿ ಹೊಡೆದಿದ್ದಾರೆ. ಮಾಧ್ಯಮಗಳಲ್ಲಿ ಕೆಲವೊಂದು ಕಾರಣಗಳನ್ನು ಉಲ್ಲೇಖಿಸಿ ಮಾಹಿತಿ ಹರಿದಾಡುತ್ತಿದೆ. ಅದರ ಬಗ್ಗೆ ನಮಗೆ ಇನ್ನೂ ಸಾಕ್ಷಿಗಳು ಸಿಕ್ಕಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುತ್ತೇವೆ. ಪ್ರಕರಣದಲ್ಲಿ ಶಾಮೀಲಾದವರ ಬಗ್ಗೆ ತನಿಖೆ ಮುಂದುವರಿದಿದೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.