ಮಂಗಳೂರು ಜಿಲ್ಲೆಯಲ್ಲಿ ಸೌಹಾರ್ದತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಿಂದ 8 ರಿಂದ 10 ಮಂದಿ ಸದಸ್ಯರು ಒಳಗೊಂಡ ಸಮಿತಿಯನ್ನು ರಚಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲಾಗುವುದು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಹೇಳಿದರು.
ಸೋಮವಾರ ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಸಚಿವ ಜಿ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಮೂರು ದಿನಗಳ ಹಿಂದೆ ಸ್ಪೆಷಲ್ ಆಕ್ಷನ್ ಫೋರ್ಸ್ ಸ್ಥಾಪನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
2001ರ ನಂತರ ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಕೈಗಾರಿಕೋದ್ಯಮಕ್ಕೆ ಒತ್ತು ನೀಡುತ್ತಾ ಬಂದಿರುವ ಸಮಿತಿಯು ಜಿಲ್ಲೆಯ ಅನೇಕರಿಗೆ ಉದ್ಯೋಗವಕಾಶ ದೊರಕುವಂತೆ ಶ್ರಮಿಸಿದೆ. ಇದೀಗ ಅವಿಭಜಿತ ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗಿರುವ ಹಿನ್ನಡೆಯನ್ನು ತೊಡೆದು ಹಾಕಿ ಹೂಡಿಕೆಗೆ ಉತ್ತೇಜನ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಸಮಿತಿಯು ಶ್ರಮಿಸಲಿದ್ದು, ಪ್ರತೀ ತಾಲೂಕಿನಿಂದ ಸಮಾನ ಮನಸ್ಕರ 8 ರಿಂದ 10 ಮಂದಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಿ ಶಾಂತಿಗೆ ಭಂಗ ಉಂಟು ಮಾಡುವವರ ವಿರುದ್ಧ ನಿಗಾ ಇಡುವ ಜತೆಗೆ ಶಾಂತಿ ಸ್ಥಾಪನೆಗೆ ಪೂರಕವಾದ ಜಾಗೃತಿ ಮೂಡಿಸುವಲ್ಲಿ ಶ್ರಮಿಸಲಿದೆ ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ನಿರಂತರ ಮಳೆಯ ನಡುವೆಯೇ ಕಂಪಿಸಿದ ಭೂಮಿ: ಸ್ಥಳಕ್ಕೆ ಅಧಿಕಾರಿಗಳ ದೌಡು
ಜಿಲ್ಲೆಯಲ್ಲಿ ಕೇವಲ 20 ರಿಂದ 25ರಷ್ಟು ಜನರು ಸೌಹಾರ್ದಕ್ಕೆ ಭಂಗ ಉಂಟು ಮಾಡುತ್ತಿದ್ದಾರೆ. ಇದರಿಂದ ಉಂಟಾಗುವ ಅಹಿತಕರ ಘಟನೆಗಳನ್ನು ನಿಯಂತ್ರಿಸಲು ಸರ್ಕಾರ ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಜಿಲ್ಲೆಯ ಜನರು ಧರ್ಮ ಭೇದವಿಲ್ಲದೆ ಅನ್ಯೋನ್ಯತೆಯಿಂದ ಬಾಳಿದವರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಭಾಷಣಗಳ ಮೂಲಕ ಜಿಲ್ಲೆಯಲ್ಲಿ ದ್ವೇಷ ಅಸೂಯೆ ಹರಡುವಂತೆ ಆಗಿದೆ. ಅದರೆ ನಮ್ಮ ಸಮಿತಿಯು ಕರಾವಳಿಯಲ್ಲಿ ಶಾಂತಿ ಸ್ಥಾಪಿಸಲು ಶ್ರಮಿಸುತ್ತದೆ ಎಂದು ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ.ಜಗದೀಶ್ ಅಧಿಕಾರಿ ತಿಳಿಸಿದರು.
