ರಾಜ್ಯದಲ್ಲಿ ಸದ್ದು ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ (ಜ.21) ನಡೆದಿರುವ ಬಗ್ಗೆ ವರದಿಯಾಗಿದೆ.
ಮಂಗಳೂರು-ಕೇರಳ ಗಡಿಭಾಗವಾದ ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್ ನಗರ ನಿವಾಸಿ ಕಣ್ಣನ್ ಮಣಿ ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್ ಅವರು ಗುಂಡಿನ ದಾಳಿ ನಡೆಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ – ಕೇರಳ ಗಡಿಯ ತಲಪಾಡಿ ಗ್ರಾಮದ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ಸ್ಥಳ ಮಹಜರು ಮಾಡುವ ವೇಳೆ ತಪ್ಪಿಸಿಕೊಳ್ಳುವ ಕಣ್ಣನ್ ಮಣಿ ಯತ್ನ ನಡೆಸಿದ್ದ ಎಂದು ವರದಿಯಾಗಿದೆ.

ನಿನ್ನೆ ತಮಿಳುನಾಡಿನ ತಿರುವನ್ವೇಲಿ ಪದ್ಮನೇರಿ ಗ್ರಾಮವೊಂದರಲ್ಲಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಆರೋಪಿಗಳನ್ನ ಮಂಗಳೂರಿಗೆ ಕರೆ ತರಲಾಗುತ್ತಾ ಇತ್ತು. ಕರ್ನಾಟಕ- ಕೇರಳ ಗಡಿ ಭಾಗದ ತಲಪಾಡಿಯ ಅಲಂಕಾರು ಗುಡ್ಡದಲ್ಲಿ ಈ ಘಟನೆ ನಡೆದಿದೆ. ದರೋಡೆಯ ಪ್ರಮುಖ ಆರೋಪಿ ಕಣ್ಣನ್ ಮಣಿ ಅವರನ್ನ ದೇರಳಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನು ಓದಿದ್ದೀರಾ? ಡಾಲಿ ಚಾಯ್‌ವಾಲ ಮಂಗಳೂರಿನವನಾಗಿದ್ದಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್ ಬಿ ಶೆಟ್ಟಿ
ಈ ಪ್ರಕರಣಕ್ಕೆ ಸಂಬಂಧಿಸಿ ಕಣ್ಣನ್ ಮಣಿ, ಡಿ ಮುರುಗನ್ ದೇವರ್ ಹಾಗೂ ಯೋಶುವಾ ರಾಜೇಂದ್ರನ್ ಎಂಬ ಮೂವರು ಅರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು. ಆರೋಪಿಗಳು ನೀಡಿದ ಮಾಹಿತಿಯ ಪ್ರಕಾರ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ.ರಸ್ತೆಯ ಆಲಂಕಾರು ಗುಡ್ಡೆ ಬಳಿ ಇಂದು ಸಂಜೆ 4:20 ರ ಸುಮಾರಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು. ಆರೋಪಿಯನ್ನು ಉಳ್ಳಾಲ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ತನಿಖಾ ತಂಡದ ಸದಸ್ಯರ ಉಪಸ್ಥಿತಿಯಲ್ಲಿ ತಪಾಸಣೆ ನಡೆಸಲಾಯಿತು.

ತಪಾಸಣೆಯ ವೇಳೆ ಆರೋಪಿ ಕಣ್ಣನ್ ಮಣಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಸ್ಥಳದಲ್ಲಿ ಸಿಕ್ಕ ಮುರಿದ ಬಿಯರ್ ಬಾಟಲಿಯನ್ನು ಬಳಸಿ ಬೆಂಗಾವಲು ಸಿಬ್ಬಂದಿಗಳಾದ ಅಂಜನಪ್ಪ ಮತ್ತು ನಿತಿನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಆರೋಪಿಯು ತನಿಖಾಧಿಕಾರಿ, ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ತಳ್ಳಿ ಚಾಕುವಿನಿಂದ ಇರಿದು ಕೊಲ್ಲಲು ಪ್ರಯತ್ನಿಸಿದ್ದಾರೆ. ಹೀಗಾಗಿ ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದ ಸಿಸಿಬಿ ಘಟಕದ ಪೊಲೀಸ್ ಇನ್ಸ್‌ಪೆಕ್ಟರ್ ರಫೀಕ್ ಎಚ್ಚರಿಕೆ ನೀಡಿದರೂ, ಆರೋಪಿ ತನ್ನ ದಾಳಿಯನ್ನು ಮುಂದುವರಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಇದಕ್ಕೆ ಪ್ರತಿಯಾಗಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಉಳ್ಳಾಲ ಪಿಎಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ, ಸಿಸಿಬಿ ಘಟಕದ ಪಿಸಿ ಅಂಜನಪ್ಪ, ಉಳ್ಳಾಲ ಪಿಎಸ್‌ಪಿಸಿ ನಿತಿನ್ ಗಾಯಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಡಾಲಿ ಚಾಯ್‌ವಾಲ ಮಂಗಳೂರಿನವನಾಗಿದ್ದಿದ್ದರೆ ಆತನ ಸ್ಟಾಲ್ ಕೂಡ ಬುಲ್ಡೋಜ್ ಆಗುತ್ತಿತ್ತು : ನಟ ರಾಜ್ ಬಿ ಶೆಟ್ಟಿ
ಗಾಯಗೊಂಡ ಸಿಬ್ಬಂದಿ ಮತ್ತು ಆರೋಪಿಗಳನ್ನು ತಕ್ಷಣ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


