ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ ನಾಳೆ ಅಂದರೆ ಮೇ 16ರ ಶುಕ್ರವಾರದಂದು ನಗರದ ಪಡೀಲ್ ಜಂಕ್ಷನ್‌ನಲ್ಲಿ ಉದ್ಘಾಟನೆಗೊಳ್ಳುತ್ತಿದೆ. 2016ರಲ್ಲಿ ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಶಂಕುಸ್ಥಾಪನೆ ಮಾಡಲಾಗಿದ್ದ ಕಟ್ಟಡ ಬರೋಬ್ಬರಿ 9 ವರ್ಷಗಳ ನಂತರ ಉದ್ಘಾಟನೆಗೆ ಸಿದ್ಧವಾಗಿದೆ. ಶಂಕುಸ್ಥಾಪನೆ ಮಾಡಿದ್ದ ಸಿದ್ದರಾಮಯ್ಯನವರೇ ಉದ್ಘಾಟನೆಗೆ ಆಗಮಿಸುತ್ತಿರುವುದು ಮತ್ತೊಂದು ವಿಶೇಷ. ಆದರೆ, ಪ್ರಜೆಗಳಿಗೆ ‘ಪ್ರಜಾ ಸೌಧ’ದ ಬಳಿ ಪ್ರತಿಭಟನೆಗೆ ಅವಕಾಶ ಕಲ್ಪಿಸುವ ಸ್ಥಳ ಇಲ್ಲ ಅನ್ನೋದು ಕರಾವಳಿಯ ಹೋರಾಟಗಾರರ ಆರೋಪ.
ದ.ಕ. ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ, ಸ್ಮಾರ್ಟ್ ಸಿಟಿ ಲಿಮಿಟೆಡ್ ಆಶ್ರಯದಲ್ಲಿ ಪಡೀಲ್‌ನಲ್ಲಿ ನಿರ್ಮಾಣಗೊಂಡಿರುವ ನೂತನ ಜಿಲ್ಲಾಧಿಕಾರಿ ಸಂಕೀರ್ಣ ‘ಪ್ರಜಾಸೌಧ’ವನ್ನು ಮೇ 16ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ. ಮೂರು ಮಹಡಿಗಳ ಸಂಕೀರ್ಣವು ಒಟ್ಟು 253159.67 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಆಧುನಿಕ ವ್ಯವಸ್ಥೆಯೊಂದಿಗೆ ತುಳುನಾಡಿನ ಪಾರಂಪರಿಕ ಶೈಲಿಯಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಮೇ 16ರಿಂದಲೇ ಎಲ್ಲ ಕಚೇರಿಗಳು ಕಾರ್ಯ ನಿರ್ವಹಣೆಯನ್ನು ಪ್ರಾರಂಭಿಸಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

2016ರಲ್ಲಿ 75 ಕೋಟಿ ರೂ. ಅನುದಾನ ನೀಡಿ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ನಂತರದ ಎರಡು ವರ್ಷಗಳ ಕಾಲ ಕಾಮಗಾರಿ ಭರದಿಂದ ನಡೆದರೂ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನವನ್ನೇ ನೀಡದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಪೀಕರ್ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುತುವರ್ಜಿಯಿಂದ ಹೆಚ್ಚುವರಿ 20 ಕೋಟಿ ರೂ. ಅನುದಾನ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಆರಂಭದಲ್ಲಿ 55 ಕೋಟಿ ಇದ್ದ ಅನುದಾನ, ಪೂರ್ಣವಾಗಲು 75 ಕೋಟಿ ತಗುಲಿದೆ.
ಹೊಸ ಕಟ್ಟಡದಲ್ಲಿ ಯಾವ ಇಲಾಖೆಗಳ ಕಚೇರಿ ಇರಲಿದೆ?
ತಳ ಮಹಡಿ(ಬೇಸ್‌ಮೆಂಟ್)
ತಳ ಮಹಡಿಯಲ್ಲಿ ಮಂಗಳೂರು ವನ್ ಕಚೇರಿ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಅಂಚೆ ಕಚೇರಿ, ಪೊಲೀಸ್ ಚೌಕಿ, ಕ್ಯಾಂಟೀನ್, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ, ಬ್ಯಾಂಕ್, ಖಜಾನೆ ಮತ್ತು ಭದ್ರತಾ ಕೊಠಡಿ, ಜಿಲ್ಲಾ ಆರೋಗ್ಯ ಕೇಂದ್ರ, ದಾಸ್ತಾನು ಕೊಠಡಿ ಹಾಗೂ ಮೂರು ವ್ಯಾಪಾರ ಮಳಿಗೆಗಳನ್ನು ಹೊಂದಿರಲಿದೆ.
ನೆಲ ಮಹಡಿ(ಗ್ರೌಂಡ್ ಫ್ಲೋರ್)
ನೆಲ ಮಹಡಿಯಲ್ಲಿ ಮಾಹಿತಿ ಕೇಂದ್ರ, ಸಾರ್ವಜನಿಕ ಸಂಪರ್ಕ ಕೇಂದ್ರ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಡಾ.ಬಿ.ಆರ್. ಅಂಬೇಡ್ಕರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಸಂಸದ ಕ್ಯಾಬಿನ್, ಉಳ್ಳಾಲ ಶಾಸಕರ ಕ್ಯಾಬಿನ್, ಜಿಲ್ಲಾ ಉಸ್ತುವಾರಿ ಸಚಿವರ ಕ್ಯಾಬಿನ್, ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತರ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಹೆಚ್ಚುವರಿ ಕ್ಯಾಬಿನ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಖಜಾನೆ, ಜಿಲ್ಲಾ ಅಂತರ್ಜಲ ಕಚೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿಗಳನ್ನು ಹೊಂದಿರಲಿದೆ.

ಪ್ರಥಮ ಮಹಡಿ
ಪ್ರಥಮ ಮಹಡಿಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ, ಕಂದಾಯ ಶಾಖೆ, ದಾಸ್ತಾನು ಕೊಠಡಿ, ಭೂಮಿ ಶಾಖೆ, ಕೆಎಸ್.ಡಬ್ಲ್ಯು.ಎ.ಎನ್., ರಾಷ್ಟ್ರೀಯ ಮಾಹಿತಿ ಕೇಂದ್ರ, ಆಡಳಿತ ಶಾಖೆ, ಅಪರ ಜಿಲ್ಲಾಧಿಕಾರಿ ಕಚೇರಿ, ಸಭಾಂಗಣ, ಜಿಲ್ಲಾಧಿಕಾರಿ ಕೊಠಡಿ, ಜಿಲ್ಲಾಧಿಕಾರಿ ನ್ಯಾಯಾಲಯ, ದಂಡನಾ ಶಾಖೆ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಮುಜರಾಯಿ ತಹಶೀಲ್ದಾರರು, ಮುಜರಾಯಿ ಶಾಖೆ, ತೀರಿಕೆ ಶಾಖೆ (ಕ್ಲಿಯರೆನ್ಸ್ ಸೆಕ್ಷನ್), ಜಿಲ್ಲಾ ನಗರಾಭಿವೃದ್ಧಿ ಕೋಶ, ಚುನಾವಣಾ ಶಾಖೆ, ಕಾನೂನು ಶಾಖೆ, ಕೊಠಡಿ, ಶಿಷ್ಟಾಚಾರ ಶಾಖೆ ಕೊಠಡಿಗಳನ್ನು ಹೊಂದಿದೆ.
ಎರಡನೆ ಮಹಡಿಯಲ್ಲಿ ಕರ್ನಾಟಕ ಸರಕಾರಿ ವಿಮಾ ಇಲಾಖೆ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಅಭಿಲೇಖಾಲಯ, ಒಳಮುಖ ಹೊರಮುಖ ವಿಭಾಗ, ಅಭಿಲೇಖಾಲಯ- 1, 2, 3, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರಕಾರಿ ವಿಮಾ ಇಲಾಖೆ, ಪಿಂಚಣಿ- ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ ಇಲಾಖೆ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ, ಅರಣ್ಯ ಜೀವಸ್ಥಿತಿ ಮತ್ತು ಪರಿಸರ ಇಲಾಖೆ, ಹಿಂದೂ ಧಾರ್ಮಿಕ ದತ್ತಿ ಅಭಿಲೇಖಾಲಯ, ನಿರ್ಮಿತಿ ಕೇಂದ್ರ, ಅರಣ್ಯ ವ್ಯವಸ್ಥಾಪನಾಧಿಕಾರಿಯವರ ಕಚೇರಿ, ಸಭಾಂಗಣ, ದಾಸ್ತಾನು ಕೊಠಡಿಯನ್ನು ಹೊಂದಿರಲಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
ಧರಣಿ, ಪ್ರತಿಭಟನೆಗೆ ಜಾಗ ಮೀಸಲಿಡದಿರುವುದು ಖೇದಕರ, ಖಂಡನಾರ್ಹ: ಮುನೀರ್ ಕಾಟಿಪಳ್ಳ
ಪ್ರಜೆಗಳಿಗೆ ‘ಪ್ರಜಾ ಸೌಧ’ದ ಬಳಿ ಪ್ರತಿಭಟನೆಗೆ ಅವಕಾಶ ಕಲ್ಪಿಸುವ ಸ್ಥಳ ಕಲ್ಪಿಸದಿರುವುದಕ್ಕೆ ಕರಾವಳಿಯ ಹೋರಾಟಗಾರರು ಆಕ್ಷೇಪ ಎತ್ತಿದ್ದಾರೆ. ಈ ಬಗ್ಗೆ ಫೇಸ್‌ಬುಕ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, “ಧರಣಿ, ಪ್ರತಿಭಟನೆಗೆ ಜಾಗ ಮೀಸಲಿಡದಿರುವುದು ಖೇದಕರ, ಖಂಡನಾರ್ಹ” ಎಂದು ತಿಳಿಸಿದ್ದಾರೆ.

“ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ನಾಳೆ ಉದ್ಘಾಟನೆಗೊಳ್ಳುತ್ತಿದೆ. 6 ಎಕರೆ ಜಮೀನಿನಲ್ಲಿ 2 ಲಕ್ಷಕ್ಕೂ ಅಧಿಕ ಚದರ ಅಡಿಗಳ ಆಕರ್ಷಕ, ಎಲ್ಲಾ ಸೌಲಭ್ಯಗಳುಲ್ಲ, 21 ಇಲಾಖೆಗಳು ಕಾರ್ಯ ನಿರ್ವಹಿಸುವ ವಿಶಾಲವಾದ ಕಟ್ಟಡ ಎಂದು ಜಿಲ್ಲಾಡಳಿತ ಹೇಳಿಕೊಂಡಿದೆ. ಆದರೆ, ಈ ಹೊಸ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಜನ ಸಾಮಾನ್ಯರು ತಮ್ಮ ಹಕ್ಕೊತ್ತಾಯ ದಾಖಲಿಸಲು ನಡೆಸುವ ಧರಣಿ, ಪ್ರತಿಭಟನೆಗಳಿಗೆ ಜಾಗ ಮೀಸಲಿಟ್ಟಿಲ್ಲ. ಈ ಕುರಿತು ಯಾರೂ ಮಾತನಾಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಇಷ್ಟು ವಿಶಾಲ ಜಾಗದಲ್ಲಿ, ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ, ಪ್ರತಿಭಟನೆಗೆ ಜಾಗ ಮೀಸಲಿಡದಿರುವುದು ಖೇದಕರ, ಖಂಡನಾರ್ಹ. ಬಹುಷಃ, ಮಂಗಳೂರಿನ ಜನರಿಗೆ ಕೋಮು ಗಲಾಟೆ ಮಾಡಲು ಅವಕಾಶ ಮಾಡಿಕೊಟ್ಟರೆ ಸಾಕು, ಧರಣಿ, ಪ್ರತಿಭಟನೆಗಳೆಲ್ಲ ಯಾತಕ್ಕೆ ? ಎಂದು ಸರಕಾರ ಭಾವಿಸಿರುವ ಹಾಗಿದೆ” ಎಂದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಮುನೀರ್ ಕಾಟಿಪಳ್ಳ ಆಕ್ರೋಶ ಹೊರಹಾಕಿದ್ದಾರೆ.

ದೇಶದಲ್ಲೇ ಅತಿ ದೊಡ್ಡ ಜಿಲ್ಲಾಧಿಕಾರಿ ಕಚೇರಿ: ಮಂಜುನಾಥ ಭಂಡಾರಿ
“ದಕ್ಷಿಣ ಕನ್ನಡ ಜಿಲ್ಲೆಯ ಬಹು ವರ್ಷಗಳ ಕನಸಾಗಿರುವ ಎರಡು ಪ್ರಮುಖ ಯೋಜನೆಗಳಾದ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮತ್ತು ಅಂತಾರಾಷ್ಟ್ರೀಯ ದರ್ಜೆಯ ಒಳಾಂಗಣ ಕ್ರೀಡಾಂಗಣವನ್ನು ಮೇ 16ರಂದು ಸ್ವತಃ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ದೇಶದಲ್ಲೇ ಅತಿ ದೊಡ್ಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “2016ರಲ್ಲಿ 75 ಕೋಟಿ ರು. ಅನುದಾನ ನೀಡಿ ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ನಂತರದ 2 ವರ್ಷಗಳ ಕಾಲ ಕಾಮಗಾರಿ ಭರದಿಂದ ನಡೆದರೂ ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುದಾನವನ್ನೇ ನೀಡದೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸ್ಪೀಕರ್ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುತುವರ್ಜಿಯಿಂದ ಹೆಚ್ಚುವರಿ 20 ಕೋಟಿ ರೂ. ಅನುದಾನ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ” ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಮಾಜಿ ಸಚಿವ ರಮಾನಾಥ ರೈ ಅವರ ಕೊಡುಗೆ. ಬಹುತೇಕ ಕಚೇರಿಗಳು ಒಂದೇ ಕಡೆ ಕಾರ್ಯ ನಿರ್ವಹಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಭಂಡಾರಿ ಮಾಹಿತಿ ನೀಡಿದರು.
ಇದನ್ನು ಓದಿದ್ದೀರಾ? ಬಿಡದಿ ಗ್ರೌಂಡ್ ರಿಪೋರ್ಟ್: ಹಕ್ಕಿಪಿಕ್ಕಿ ಬಾಲಕಿಯ ಅತ್ಯಾಚಾರ, ಕೊಲೆ ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆಯೇ?
“ದ.ಕ. ಜಿಲ್ಲೆಯ ಸುಮಾರು 30 ಸಾವಿರ ಜನರಿಗೆ ತಮ್ಮ ಭೂಮಿಯ ಆರ್‌ಟಿಸಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೋಡಿ ಅಭಿಯಾನ ನಡೆಸಿ ಇದುವರೆಗೆ 8 ಸಾವಿರ ಆರ್‌ಟಿಸಿಗಳನ್ನು ಸಿದ್ಧಪಡಿಸಲಾಗಿದೆ. ಈ ಫಲಾನುಭವಿಗಳೆಲ್ಲರಿಗೂ ಡಿಸಿ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲೇ ಸಿಎಂ ಆರ್‌ಟಿಸಿಗಳನ್ನು ವಿತರಿಸಲಿದ್ದಾರೆ. ಬೆಳ್ತಂಗಡಿ, ಬಂಟ್ವಾಳದಲ್ಲಿ ತಲಾ 2 ಸಾವಿರ ಮಂದಿ, ಮೂಡುಬಿದಿರೆಯಲ್ಲಿ ಒಂದೂವರೆ ಸಾವಿರ, ಮಂಗಳೂರಲ್ಲಿ 1 ಸಾವಿರ ಸೇರಿದಂತೆ ಜಿಲ್ಲಾದ್ಯಂತ ಫಲಾನುಭವಿಗಳನ್ನು ಗುರುತಿಸಿ ಕರೆತರಲು ವ್ಯವಸ್ಥೆ ಮಾಡಲಾಗಿದೆ” ಎಂದು ಮಂಜುನಾಥ್ ಭಂಡಾರಿ ಹೇಳಿದರು.