ಮಂಗಳೂರು ನಗರದ ಜೆರೋಸಾ ಶಾಲೆಯ ವಿವಾದ ದಿನದಿಂದ ವಿಕೋಪಕ್ಕೆ ಹೋಗುತ್ತಿದ್ದು, ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡಿ ವಿದ್ಯಾರ್ಥಿಗಳನ್ನು ಪ್ರಚೋದಿಸಿದ್ದ ಬಿಜೆಪಿ ಶಾಸಕರು, ಹಿಂದೂ ಸಂಘಟನೆಯ ಪ್ರಮುಖರ ಮೇಲೆ ಎಫ್‌ಐಆರ್ ದಾಖಲು ಮಾಡಿರುವುದನ್ನು ಖಂಡಿಸಿ ಸಂಘಪರಿವಾರದ ಕಾರ್ಯಕರ್ತರು ಮಂಗಳೂರಿನಲ್ಲಿ ದಿಡೀರ್ ರಸ್ತೆ ತಡೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ.
ಕೂಡಲೇ ಜಾಗೃತರಾದ ಪೊಲೀಸರು ಹಲವು ಮಂದಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಜೆರೋಸಾ ಶಾಲೆಯ ಘಟನೆ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ, ಭರತ್ ಶೆ್ಟ್ಟಿ, ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್, ಪಾಲಿಕೆಯ ಸದಸ್ಯರುಗಳ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಜಿಲ್ಲಾಡಳಿತ ಮತ್ತು ಮಂಗಳೂರು ಪೊಲೀಸರ ಕ್ರಮ ಖಂಡಿಸಿ ಇಂದು ನಗರದಲ್ಲಿ ವಿಹೆಚ್‌ಪಿ ಹರತಾಳಕ್ಕೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕ್ಲಾಕ್ ಟವರ್ ಬಳಿ ನೂರಾರು ಬಜರಂಗದಳ ಮತ್ತು ವಿಹೆಚ್‌ಪಿ ಕಾರ್ಯಕರ್ತರು ಸೇರಿದ್ದರು.
ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಿದ್ದರು. ಆದರೆ, ಕಾರ್ಯಕರ್ತರು ದಿಡೀರ್ ಆಗಿ ರಸ್ತೆ ತಡೆಗೆ ಮುಂದಾದರು, ಇದಕ್ಕೆ ಪೊಲೀಸರು ಅವಕಾಶ ನೀಡದ ಕಾರಣ ಕಾರ್ಯಕರ್ತರು ಮತ್ತು ಪೊಲೀಸರ ಮಧ್ಯೆ ಜಟಾಪಟಿ ನಡೆಯಿತು. ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಕಾರ್ಯಕರ್ತರು ಮುನ್ನುಗ್ಗಲು ಯತ್ನಿಸಿದಾಗ ಸಂಘಪರಿವಾರದ ಕಾರ್ಯಕರ್ತರನ್ನು ಕೂಡಲೇ ಪೊಲೀಸರು ಬಂಧಿಸಿದ್ದಾರೆ.