ಕರಾವಳಿಯಲ್ಲಿ ಭಾಗದಲ್ಲಿ ಮಳೆ ಅವಲಂಬಿಸಿ ಭತ್ತ ಬೆಳೆಯುವವರೇ ಹೆಚ್ಚು. ಮಳೆಗಾಲ ಪ್ರಾರಂಭವಾಗಿ ಒಂದೂವರೆ ತಿಂಗಳು ಕಳೆದರೂ ಇತ್ತ ಬೇಸಾಯ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು 9,750 ಹೆಕ್ಟರ್‌ಗಳಲ್ಲಿ ಭತ್ತ ಬೆಳೆಸುವ ಗುರಿ ಹೊಂದಿದ್ದು, ಇದರಲ್ಲಿ ಈವರೆಗೆ 3,750 ಹೆಕ್ಟರ್ ಭೂಮಿಯಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಇನ್ನೂ ಸುಮಾರು 6 ಸಾವಿರ ಹೆಕ್ಟರ್ ಭೂಮಿಯಲ್ಲಿ ಬಿತ್ತನೆ ಬಾಕಿ ಇದೆ.
ಜಿಲ್ಲೆಯ ಮೂಲ್ಕಿ ತಾಲ್ಲೂಕಿನಲ್ಲಿ 850 ಹೆಕ್ಟರ್‌ನಲ್ಲಿ ಈಗಾಗಲೇ ಬಿತ್ತನೆಯಾಗಿದ್ದು, ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಈ ಬಾರಿ ಸುಳ್ಯ ತಾಲ್ಲೂಕಿನಲ್ಲಿ ಅತೀ ಕಡಿಮೆ 55 ಹೆಕ್ಟೇರ್‌ನಲ್ಲಿ ಮಾತ್ರವೇ ಬಿತ್ತನೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 508.75 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದ್ದು, 177 ಕ್ವಿಂಟಾಲ್ ಇನ್ನೂ ಇಲಾಖೆಯಲ್ಲಿ ದಾಸ್ತಾನು ಇದೆ.
ಇದನ್ನೂ ಓದಿ: ಮಂಗಳೂರು | ಜು.14-17ರವರೆಗೆ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ
ಇತ್ತೀಚಿನ ವರ್ಷಗಳಲ್ಲಿ ಬಿತ್ತನೆಗಿಂತ ನೇಜಿ ನಾಟಿಯತ್ತ ರೈತರ ಒಲವು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಇತ್ತ ಬೇಸಾಯಕ್ಕೆ ಅಡ್ಡಿ ಆಗಿದೆ. ವಿಪರೀತವಾಗಿ ಮಳೆ ಆಗುವುದರಿಂದ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಹೆಚ್ಚಾದರೆ ನಾಟಿಯ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಇದರ ಜತೆಗೆ ಗೊಬ್ಬರ ಮಿಶ್ರಿತ ನೀರು ಹರಿದು ಹೋಗುತ್ತದೆ. ನಾಟಿ ವೇಳೆ ಎರಡು ದಿನಗಳ ಕಾಲ ನೀರಿನ ಮಟ್ಟ ಕಡಿಮೆ ಇರಬೇಕು. ಆದರೆ ಪ್ರಸ್ತುತ ಸುರಿಯುವ ಮಳೆಯಿಂದ ನೀರು ಹೆಚ್ಚಳವಾಗಿ ನಾಟಿ ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೊಡಿಕೊಂಡರು.
ಇದನ್ನೂ ಓದಿ: ಕೈದಿಗೆ ಮಾದಕ ವಸ್ತು ಪೂರೈಕೆ: ಮಂಗಳೂರು ಜೈಲು ಮೇಲೆ ಪೊಲೀಸ್-ಎಸ್‌ಎಎಫ್ ತಂಡ ದಾಳಿ
ರೈತರಿಗೆ ಅಗತ್ಯ ಇರುವ ರಸಗೊಬ್ಬರನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಜುಲೈ ಅಂತ್ಯದ ವೇಳೆಗೆ ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ದ.ಕ.ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಮಾಹಿತಿ ನೀಡಿದರು.