ಮಂಗಳೂರು ನಗರದ ನೀರು ಮಾರ್ಗದ ಕೆಲರಾಯಿ ಚರ್ಚ್ ಬಳಿಯ ನಿವಾಸಿ ಹೈನುಗಾರರೊಬ್ಬರ ಮನೆಯಲ್ಲಿ 7 ದನಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಜೋಸೆಫ್ ಸ್ಟ್ಯಾನಿ ಪ್ರಕಾಶ್ ಮನೆಯ 7 ಹಸುಗಳು 10 ದಿನಗಳ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ ಸಾವನ್ನಪ್ಪಿವೆ. ಯಾರೋ ವಿಷ ನೀಡಿ ಸಾಯಿಸಿರುವ ಬಗ್ಗೆ ಅನುಮಾನವಿದೆ. ಕರು ಇರುವ ಹಾಲು ಕರೆಯುವ, ತನೆಯ ಹಸುಗಳು, ದೊಡ್ಡ ಮತ್ತು ಮಧ್ಯಮ ಗಾತ್ರದ ಎತ್ತುಗಳು ಸೇರಿವೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಜೂ.12ರಂದು ಒಂದು ದನ ಸಾವನ್ನಪ್ಪಿದೆ. ಜೂ.13ರಂದು ಪಶು ವೈದ್ಯರು ಬಂದು ರಕ್ತದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಆರು ದನಗಳು ಮನೆಯಲ್ಲಿಯೇ ಸಾವನ್ನಪ್ಪಿದ್ದು, ಒಂದು ದನ ಮೇಯಲು ಬಿಟ್ಟಲ್ಲಿ ಗುಡ್ಡದಲ್ಲಿಯೇ ಮೃತಪಟ್ಟಿದೆ. ಇನ್ನೂ ಒಂದು ಜೀವನ್ಮರಣ ಸ್ಥಿತಿಯಲ್ಲಿದೆ ಎಂದು ಪ್ರಕಾಶ್ ದೂರಿನಲ್ಲಿ ತಿಳಿಸಿದ್ದಾರೆ.
ಸುಮಾರು 50 ವರ್ಷದಿಂದ ಹೈನುಗಾರಿಕೆ ನಡೆಸುತ್ತಿದ್ದೇನೆ. 30ಕ್ಕೂ ಅಧಿಕ ಜಾನುವಾರುಗಳಿವೆ. ದಿನವೂ ನೀರುಮಾರ್ಗ- ಕೆಲರಾಯಿ ಕಡೆಗೆ ದನಗಳನ್ನು ಮೇಯಲು ಬಿಡುತ್ತೇವೆ. ಇದೇ ಮೊದಲ ಬಾರಿಗೆ ಈ ರೀತಿಯ ಘಟನೆ ನಡೆದಿದೆ. ಮೇಯಲು ಹೋದ ದನಗಳಿಗೆ ಯಾರೋ ವಿಷವುಣಿಸಿದ್ದಾರೆ. ಮನೆಗೆ ಬಂದ ಬಳಿಕ ಒಂದೊಂದೇ ದನಗಳು ನಿತ್ರಾಣಗೊಂಡು, ಬಿದ್ದು ಸಾವನ್ನಪ್ಪಿವೆ. ಕುತ್ತಿಗೆ ಭಾಗದಲ್ಲಿ ಊದಿರುವುದು ಕಂಡು ಬಂದಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು | ‘ಮರೆಯಲಾಗದ ಬ್ಯಾರಿ ಮಹನೀಯರು’ ಕೃತಿಯ ಎರಡನೇ ಭಾಗ ಬಿಡುಗಡೆ
ಘಟನೆಯ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ಬಳಿಕವಷ್ಟೇ ದನಗಳ ಸಾವಿಗೆ ಕಾರಣ ತಿಳಿಯಲಿದೆ.