“ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆ ಎಂದು ಭಾಷಣಗೈದವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಿದ್ದರೆ ಅಮಾಯಕ ಯುವಕ ರಹೀಮ್ ಕೊಲೆಗೀಡಾಗುತ್ತಿರಲಿಲ್ಲ..” ಹೀಗಂತ ಆಸ್ಪತ್ರೆಯ ಮುಂದೆ ಆಕ್ರೋಶ ಹೊರಹಾಕಿದವರು ಮಂಗಳೂರಿನ ಮುಸ್ಲಿಮರು…
ಮಂಗಳೂರಿನ ಕೊಳತ್ತಮಜಲು ಎಂಬಲ್ಲಿ ಪಿಕಪ್ ಚಾಲಕನಾಗಿದ್ದ ಅಮಾಯಕ ಅಬ್ದುಲ್ ರಹಿಮಾನ್ ಎಂಬವರನ್ನು ದುಷ್ಕರ್ಮಿಗಳ ಗುಂಪು ತಲವಾರಿನಿಂದ ದಾಳಿ ನಡೆಸಿ ಹತ್ಯೆ ಮಾಡಿದೆ. ಘಟನೆಯಲ್ಲಿ ರಹೀಂ ಅವರೊಂದಿಗೆ ಇದ್ದ ಇನ್ನೋರ್ವ ಯುವಕ ಇಮ್ತಿಯಾಝ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಫಳ್ನೀರ್‍ನಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಳತ್ತಮಜಲು ನಿವಾಸಿ ಪಿಕಪ್ ಮಾಲೀಕ ರಹೀಂ ಮತ್ತು ಇಮ್ತಿಯಾಝ್ ಎಂಬವರ ಮೇಲೆ ಅಪರಿಚಿತ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದೆ. ಈ ದಾಳಿಯಲ್ಲಿ ರಹೀಂ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಹತ್ಯೆಯಾದ ರಹೀಂ ಎಸ್.ಕೆ.ಎಸ್.ಎಸ್.ಎಫ್. ಕಾರ್ಯಕರ್ತನಾಗಿದ್ದು ಕೊಳ್ತಮಜಲು ಮಸೀದಿಯ ಕಾರ್ಯದರ್ಶಿಯಾಗಿದ್ದರು ಎಂದು ತಿಳಿದುಬಂದಿದೆ. ಗಂಭೀರವಾಗಿ ಹಲ್ಲೆಗೀಡಾಗಿರುವ ಇಮ್ತಿಯಾಝ್ ಅವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಅವರನ್ನು ಚಿಕಿತ್ಸೆಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯರ ತಂಡವು ಶಸ್ತ್ರಚಿಕಿತ್ಸೆ ನಡೆಸುತ್ತಿರುವುದಾಗಿ ಸ್ಥಳೀಯರು ಈದಿನ ಡಾಟ್ ಕಾಮ್‌ಗೆ ಮಾಹಿತಿ ನೀಡಿದ್ದಾರೆ.

ಆಕ್ರೋಶ ಹೊರಹಾಕಿದ ಮುಸ್ಲಿಮರು
ಗಾಯಾಳು ಇಮ್ತಿಯಾಝ್ ಅವರನ್ನು ಆಸ್ಪತ್ರೆಗೆ ಕರೆತಂದ ಸುದ್ದಿ ತಿಳಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಮದೆ ಜಮಾಯಿಸಿದ ಮುಸ್ಲಿಂ ಬಾಂಧವರು, ಸಂಘಪರಿವಾರ ಹಾಗೂ ಜಿಲ್ಲೆಯಲ್ಲಿ ದ್ವೇಷ ಭಾಷಣಕಾರರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದೇ ವೇಳೆ ಮುಸ್ಲಿಂ ಮುಖಂಡರನ್ನು ಕೂಡ ಸುತ್ತುವರಿದು ತೀವ್ರ ತರಾಟೆಗೆ ತೆಗೆದುಕೊಂಡ ಬೆಳವಣಿಗೆ ಕೂಡ ನಡೆಯಿತು.
ಆಸ್ಪತ್ರೆಯ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳೀಯರಾದ ಮುಸ್ತಫಾ ಎಂಬುವವರು, “ಸಂಘಪರಿವಾರದ ದ್ವೇಷ ಭಾಷಣಕ್ಕೆ ಒಬ್ಬ ಅಮಾಯಕ ಮುಸ್ಲಿಂ ಯುವಕನ ಬಂಧನವಾಗಿದೆ. ಭಾನುವಾರ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆ ಎಂದು ಕೆಲವೊಂದು ಸಂಘಪರಿವಾರದ ಮುಖಂಡರು ಬಹಿರಂಗ ಕರೆ ಕೊಡುತ್ತಿದ್ದರು. ಅದರ ಪರಿಣಾಮವಾಗಿ ಇಂದು ಅಮಾಯಕ ಯುವಕ ಬಲಿಯಾಗಿದ್ದಾನೆ” ಎಂದು ತಿಳಿಸಿದರು.
ಮತ್ತೋರ್ವ ಯುವಕ ಮಾತನಾಡಿ, “ಸಂಘಪರಿವಾರದ ಮುಖಂಡರಾದ ಶರಣ್ ಪಂಪ್‌ವೆಲ್, ಭರತ್ ಕುಮ್ದೇಲು, ಶ್ರೀಕಾಂತ್‌ನಂಥವರು ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ತೀರಿಸುತ್ತೇವೆ ಎಂದು ಬಹಿರಂಗವಾಗಿ ದ್ವೇಷ ಭಾಷಣಗೈಯುತ್ತಿದ್ದಾರೆ. ಕೇವಲ ಎಫ್‌ಐಆರ್ ಆಗ್ತದೆ. ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಂದು ಆರಾಮವಾಗಿ ಸುತ್ತಾಡುತ್ತಿದ್ದಾರೆ. ಒಂದು ವೇಳೆ ಪ್ರತೀಕಾರದ ಭಾಷಣಗೈದವರನ್ನು ಕೂಡಲೇ ಬಂಧಿಸಿದ್ದಿದ್ದರೆ ಈ ಅಮಾಯಕ ಪಿಕಪ್ ಚಾಲಕ ರಹಿಮಾನ್ ಇಂದು ಬಲಿಯಾಗುತ್ತಿರಲಿಲ್ಲ. ನಮಗೆ ನ್ಯಾಯ ಬೇಕು” ಎಂದು ಆಗ್ರಹಿಸಿದರು.

“ಸಂಘಪರಿವಾರದ ಪ್ರತೀಕಾರದ ಭಾಷಣಕ್ಕೆ ಅಮಾಯಕ ಬಲಿಯಾಗಲು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಬಹಿರಂಗವಾಗಿ ದ್ವೇಷ ಭಾಷಣಗೈಯ್ಯವವರನ್ನು ಬಂಧಿಸದೇ ಇರುವುದು ಇಂದಿನ ಘಟನೆಗೆ ಕಾರಣ. ಸರ್ಕಾರ ಕೇವಲ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುತ್ತದೆಯೇ ಹೊರತು ಏನೂ ಮಾಡುವುದಿಲ್ಲ” ಎಂದು ಆಸ್ಪತ್ರೆಯ ಮುಂದಿದ್ದ ಮುಸ್ಲಿಮ್ ಸಮುದಾಯದ ಹಿರಿಯರೊಬ್ಬರು ಆಕ್ರೋಶ ಹೊರಹಾಕಿದರು.
ಯುವಕನನ್ನು ದೂಡಿದ ಪೊಲೀಸ್ ಅಧಿಕಾರಿ: ವಾಗ್ವಾದ
ಆಸ್ಪತ್ರೆಯ ಮುಂದೆ ಜನರು ಜಮಾಯಿಸಲು ತೊಡಗಿದ್ದರಿಂದ ಪೊಲೀಸರು ಆಸ್ಪತ್ರೆಗೆ ಬರುವ ಪ್ರತಿಯೊಬ್ಬರನ್ನು ವಿಚಾರಿಸಿಯೇ ಒಳಗಡೆಗೆ ಪ್ರವೇಶ ನೀಡುತ್ತಿದ್ದಾರೆ.

ಆಸ್ಪತ್ರೆಯ ಶಸ್ತಚಿಕಿತ್ಸಾ ಘಟಕದಲ್ಲಿ ಗಾಯಾಳು ಇಮ್ತಿಯಾಝ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ ಶಸ್ತಚಿಕಿತ್ಸಾ ಘಟಕದ ಬಳಿ ಪೊಲೀಸ್ ಅಧಿಕಾರಿಯೋರ್ವರು, ಶಸ್ತಚಿಕಿತ್ಸಾ ಘಟಕದ ಒಳಗಡೆ ಇದ್ದ ಯುವಕನ ಕೈ ಹಿಡಿದು ಹೊರಗೆ ದೂಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕೆಲವು ಯುವಕರು ಪೊಲೀಸ್ ಅಧಿಕಾರಿಯ ನಡೆಯನ್ನು ಪ್ರಶ್ನಿಸಿದ್ದಲ್ಲದೇ, ವಾಗ್ವಾದ ಕೂಡ ನಡೆಸಿದರು. ಬಳಿಕ ಐಸಿಯು ಘಟಕದ ಬಳಿ ಇದ್ದವರು ಸಮಾಧಾನಿಸಿದ ಬೆಳವಣಿಗೆ ಕೂಡ ನಡೆಯಿತು.
ಇದನ್ನು ಓದಿದ್ದೀರಾ? ಬಂಟ್ವಾಳ | ಯುವಕರಿಬ್ಬರ ಮೇಲೆ ದುಷ್ಕರ್ಮಿಗಳಿಂದ ತಲವಾರು ದಾಳಿ: ಓರ್ವ ಮೃತ್ಯು
ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ: ಸಚಿವ ದಿನೇಶ್ ಗುಂಡೂರಾವ್
“ಮಂಗಳೂರಿನ ಕೊಳತ್ತಮಜಲು ಬಳಿ ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯ ಹತ್ಯೆ ಖಂಡನೀಯ. ಘಟನೆಗೆ ನೈಜ ಕಾರಣ ತಿಳಿದಿಲ್ಲ. ಈ ಸಂಬಂಧ ಈಗಾಗಲೇ ಗೃಹ ಸಚಿವರಾದ ಪರಮೇಶ್ವರ್ ಹಾಗೂ ಡಿಜಿಪಿ ಜೊತೆಗೆ ಮಾತನಾಡಿದ್ದೇನೆ. ದ.ಕನ್ನಡ ಜಿಲ್ಲೆಯ ಶಾಂತಿ ಹಾಳು ಮಾಡುವ ದುಷ್ಟ ಯತ್ನವೊಂದು ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಘಟನೆಯು ಇದರ ಒಂದು ಭಾಗದಂತೆ ಕಾಣಿಸುತ್ತಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತಕ್ಕೆ ಕಠಿಣ ಸೂಚನೆ ನೀಡಿದ್ದೇನೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
“ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡುತ್ತೇನೆ” ಎಂದು ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.