ಚಿಕ್ಕಬಳ್ಳಾಪುರ | ಕನ್ನಡ ಭವನ ಲೋಕಾರ್ಪಣೆಗೆ ನಾನಾ ವಿಘ್ನ; ಸಾಹಿತ್ಯಾಸಕ್ತರ ಕಡೆಗಣನೆ ಆರೋಪ

Date:

Advertisements

ಮೊದಲಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ನಿರೀಕ್ಷೆಯಲ್ಲಿ ಮುಂದೂಡಿಕೆ | ಎರಡನೇ ಬಾರಿ ಪೋಪ್ ಪ್ರಾನ್ಸಿಸ್ ಧರ್ಮಗರು ನಿಧನದ ಹಿನ್ನೆಲೆ ಮಂದೂಡಿಕೆ

ಸತತ 12 ವರ್ಷಗಳ ನಂತರ ಲೋಕಾರ್ಪಣೆಗೆ ರಂಗೇರಿದ್ದ ಕನ್ನಡ ಭವನದ ಲೋಕಾರ್ಪಣೆ ಸಮಾರಂಭವು ಇದೀಗ ಮತ್ತೆ ಮುಂದೂಡಲ್ಪಟ್ಟಿದ್ದು, ಶುಭಕಾರ್ಯಕ್ಕೆ ನೂರೆಂಟು ವಿಘ್ನಗಳೆಂಬ ಗಾದೆಯಂತೆ ಕನ್ನಡ ಭವನ ಲೋಕಾರ್ಪಣೆಗೆ ನಾನಾ ವಿಘ್ನಗಳು ಎದುರಾಗುತ್ತಲೇ ಇರುವುದು ಸಾಹಿತ್ಯಸಕ್ತರ ಬೇಸರಕ್ಕೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಪೋಷಣೆಗೆ ಮಹಾಮನೆಯಾಗಲಿರುವ ಕನ್ನಡ ಭವನದ ಲೋಕಾರ್ಪಣೆ ಮತ್ತು ಜತೆಗೆ ಇದೇ ವೇದಿಕೆಯಲ್ಲೇ ನಡೆಸಲು ಉದ್ದೇಶಿಸಿದ್ದ 10ನೇ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎರಡಕ್ಕೂ ಶುಭಮಹೂರ್ತ ಕೂಡಿಬರದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಿಗೆ ಗ್ರಾಸವಾಗಿದೆ.

Advertisements
IMG20250422120222
oppo_2

ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದುಕೊಂಡಂತೆ ಆಗಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು. ಆದರೆ ರಾಜಕೀಯ ಇಚ್ಚಾಶಕ್ತಿ, ಅನುದಾನದ ಕೊರತೆ, ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯವಾಗುತ್ತದೆ.

ಈ 12 ವರ್ಷಗಳ ಸುಧೀರ್ಘ ಪಯಣದ ನಡುವೆ ರಾಜಕಾರಣ ಮತ್ತು ರಾಜಕಾರಣಿಗಳು ವರಸೆ ಬದಲಿಸಿದಂತೆ ಕನ್ನಡ ಭವನದ ಚಹರೆಯೂ ಬದಲಾಗಿದೆ. ಕಾಮಗಾರಿಯ ವೆಚ್ಚವೂ ಏರಿಕೆಯಾದಂತೆ ಅದನ್ನೆಲ್ಲಾ ಸರಿದೂಗಿಸಿ ಮುನ್ನಡೆಸಲು ಒಬ್ಬ ಸಮರ್ಥ ದಂಡನಾಯಕನ ಅಗತ್ಯವಿತ್ತು. ಸಚಿವ ಡಾ.ಎಂ.ಸಿ.ಸುಧಾಕರ್ ಮೂಲಕ ದಶಕಕ್ಕೂ ಮೀರಿದ ಕನಸಾಗಿ ಜೀವಂತಿಕೆ ಪಡೆದುಕೊಂಡು ರಂಗಮಂದಿರದ ಬದಲಿಗೆ ಕನ್ನಡ ಭವನವಾಗಿ ಮೈಕೊಡವಿ ನಿಂತಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರ | ರಸ್ತೆ ವಿಚಾರಕ್ಕೆ ಗಲಾಟೆ; ಕ್ರಷರ್‌ ಮಾಲೀಕನಿಂದ ವ್ಯಕ್ತಿ ಕಾಲಿಗೆ ಗುಂಡೇಟು

ನಿಜ ಯುಗಧರ್ಮದಾಟದ ಸೂತ್ರದಾರಿಗಳೆಂಬಂತೆ ಚಿಕ್ಕಬಳ್ಳಾಪುರ ಕೇಂದ್ರ ಸ್ಥಾನಕ್ಕೆ ನೂತನ ಶಾಸಕರು ಬಂದಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಬದಲಾದರು. ಇದಾದ ಮೇಲೆ ಮಂದಿರ ನಿರ್ಮಾಣಕ್ಕಿದ್ಧ ಅಡೆತಡೆಗಳಳು ಮಂಜಿನಂತೆ ಕರಗಿ ಕನ್ನಡ ಭವನ ನಿರ್ಮಾಣದ ಕಾಮಗಾರಿ ಸಾಕಷ್ಟು ಬದಲಾವಣೆಗಳೊಂದಿಗೆ ಏ.23ಕ್ಕೆ ಉದ್ಘಾಟನೆಯ ಹಂತಕ್ಕೆ ಬಂದು ನಿಂತಿತ್ತು.

ಅಂತೂ ಇಂತು ಕುಂತಿ ಮಕ್ಕಳಿಗೆ ರಾಜ್ಯಭಾರ ಬಂತಲ್ಲ ಎಂಬ ಮಾತಿನಂತೆ ಕನ್ನಡ ಭವನದ ಲೋಕಾರ್ಪಣೆಗೆ ಶುಭ ಮಹೂರ್ತ ಕೂಡಿಬಂತಲ್ಲ ಎಂದು ಜನತೆ ನಿಟ್ಟುಸಿರು ಬಿಟ್ಟು, ಲೋಕಾರ್ಪಣೆಯೊಂದಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನ ಮಾಡಲು ತಯಾರಿಯಲ್ಲಿ ಮುಳುಗಿದ್ದರು.

IMG20250422121359
oppo_2

ಹೂಗಳ ಖರೀದಿ, ತರಕಾರಿ ಖರೀದಿ, ದಿನಸಿ ಖರೀದಿ ಮುಗಿದಿದ್ದು, ಅಡುಗೆ ಭಟ್ಟರ ತಂಡವೂ ಒಕ್ಕಲಿಗರ ಕಲ್ಯಾಣ ಮಂಟಪಕ್ಕೆ ಬಂದು ಬೀಡುಬಿಟ್ಟಿತ್ತು. ಹಾಲಿಗೆ ಆರ್ಡರ್ ಮಾಡಿದ್ದು ಡೇರಿಯಿಂದ ತರಬೇಕಿತ್ತು. ಜಿಲ್ಲಾ ಕೇಂದ್ರವೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮ್ಮೇಳನದ ಬ್ಯಾನರ್‌ಗಳು ರಾರಾಜಿಸಿದ್ದವು. ಕಸಾಪ ಪದಾಧಿಕಾರಿಗಳು, ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಆಹ್ವಾನ ಪತ್ರಿಕೆಗಳನ್ನು ಹಂಚಿ, ಕನ್ನಡ ಧ್ವಜಗಳನ್ನು ಸಿದ್ಧಪಡಿಸಿದ್ದರು. ಶಾಲಾ ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಬರಲು ತಿಳಿಸಿ ಶಿಸ್ತಿನ ಪಾಠ ಮಾಡಿದ್ದರು. ಈ ಎಲ್ಲಾ ಚಟವಟಿಕೆಗಳಿಗೆ ದಿಢೀರ್ ಬ್ರೇಕ್ ಬಿದ್ದಿದೆ.

ಕಾರಣ, ಜಾಗತಿಕ ಶಾಂತಿದೂತ ಅಜಾತ ಶತ್ರು ಕ್ರಿಶ್ಚಿಯನ್ ಧರ್ಮಗುರು 88 ವರ್ಷದ ಪೋಪ್ ಪ್ರಾನ್ಸಿಸ್ ನಿಧನದ ಸುದ್ದಿ. ಇವರ ಗೌರವಾರ್ಥವಾಗಿ ಏ.23, 24 ಎರಡು ದಿನಗಳ ಕಾಲ ಭಾರತ ಸರಕಾರ ದೇಶಾದ್ಯಂತ ಶೋಕಾಚರಣೆಗೆ ಆದೇಶಿಸಿದ್ದು, ಈ ಅವಧಿಯಲ್ಲಿ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಬಾರದೆಂಬ ನಿಷೇದಾಜ್ಞೆ. ಇದು ಎರಡನೇ ಬಾರಿಯ ಮುಂದೂಡಿಕೆ.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಭಾಷಾ ವೈಷಮ್ಯ ಬಿತ್ತಿದ ಭಂಡರು, ಬಿತ್ತರಿಸಿದ ಬುದ್ಧಿಗೇಡಿಗಳು

IMG20250422120515 1
ಕನ್ನಡ ಭವನ ಸಭಾಂಗಣ

ಇದಕ್ಕೂ ಮೊದಲು ಇದೇ ಏಪ್ರಿಲ್ 8, 9ರಂದು ನಡೆಯಬೇಕಾಗಿದ್ದ ಕಾರ್ಯಕ್ರಮವೂ ಮುಂದೂಡಲ್ಪಟ್ಟಿತ್ತು. ಕಾರಣ, ಕನ್ನಡ ಭವನದ ನಿರ್ಮಾಣಕ್ಕೆ ಬೇಕಾದ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಿ ಭವನ ಸುಂದರವಾಗಿ ಮೂಡಿಬರಲು ನೆರವು ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ದಿನಾಂಕ ಹೊಂದಾಣಿಕೆಯಾಗಿರಲಿಲ್ಲ. ಇದೀಗ ಮುಂದಿನ ದಿನಾಂಕ ಪ್ರಕಟಿಸುವುದಾಗಿ ಕನ್ನಡ ಸಂಸ್ಕೃತಿ ಇಲಾಖೆ, ಜಿಲ್ಲಾ ಕಸಾಪ, ಜಿಲ್ಲಾಡಳಿತದಿಂದ ಅಧಿಸೂಚನೆ ಹೊರಡಿಸಲಾಗಿದೆ.

ಕಸಾಪ ಜಿಲ್ಲಾಧ್ಯಕ್ಷರ ಮೇಲೆ ಆರೋಪ

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜಿಲ್ಲಾಧ್ಯಕ್ಷ ಕೋ ಡಿ ರಂಗಪ್ಪ, ತಾಲೂಕು ಅಧ್ಯಕ್ಷ ಸೊನ್ನೇಗೌಡ ಅವರ ಗುಂಪುಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲೆಯ ಸಾಹಿತ್ಯಾಸಕ್ತರನ್ನು ಕಡೆಗಣಿಸಿದ್ದಾರೆ. ನಿಷ್ಠಾವಂತ ಸಾಧಕರನ್ನು ಗುರುತಿಸುವಲ್ಲಿ ಕಸಾಪ ಎಡವಿದೆ. ವರ್ಷಗಳ ಕಾಲ ಸಾಹಿತ್ಯ ಪರಿಷತ್ತಿನಲ್ಲಿ ದುಡಿದವರನ್ನು ಮೂಲೆಗುಂಪು ಮಾಡಲಾಗಿದೆ ಎಂಬೆಲ್ಲಾ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಜಾಲತಾಣಗಳಲ್ಲಿ ಸಾಹಿತಿಗಳು, ಚಿಂತಕರು ಕಸಾಪ ವೈಫಲ್ಯಗಳನ್ನು ಹರಿಬಿಟ್ಟಿರುವುದು ಗೊತ್ತಾಗಿದೆ.

ಒಟ್ಟಾರೆಯಾಗಿ, ಕನ್ನಡ ಭವನದ ಲೋಕಾರ್ಪಣೆಯ ದಿನಾಂಕ ಮುಂದೆ ಮುಂದೆ ಹೋಗುತ್ತಿರುವುದಕ್ಕೂ, ಇದರ ಹಿನ್ನೆಲೆಯಲ್ಲಿ ಘಟಿಸುತ್ತಿರುವ ಘಟನಾವಳಿಗಳನ್ನು ಪರಿಗಣಿಸಿ ಹೇಳುವುದಾದರೆ, ಇಂತಹ ಸಂದರ್ಭಗಳಲ್ಲಿ ಜನರ ನಂಬಿಕೆಯ ಮೇಲೆ ನೇರ ಪ್ರಭಾವ ಬೀರುವುದಂತೂ ಸುಳ್ಳಲ್ಲ. ಇದನ್ನು ಮನಗಂಡು ಕಸಾಪ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಭವನದ ಉದ್ಘಾಟನೆ ಮತ್ತು ಸಮ್ಮೇಳನವನ್ನು ನಿರ್ವಿಘ್ನವಾಗಿ ನಡೆಸಬೇಕು ಎಂಬುದೇ ಎಲ್ಲರ ಸದಾಶಯವಾಗಿದೆ.

WhatsApp Image 2024 08 09 at 11.58.31 de404b09
+ posts

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.

ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು. 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಜಯ್‌ ಕುಮಾರ್ ಗಜ್ಜರಹಳ್ಳಿ
ವಿಜಯ್‌ ಕುಮಾರ್ ಗಜ್ಜರಹಳ್ಳಿ
ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ. ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು. 

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X