ವಿಚ್ಛೇದಿತ ಮತ್ತು ವಿಧವೆಯಾಗಿರುವ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಚಿಕ್ಕಬಳ್ಳಾಪುರ ಸೆನ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಬೆಂಗಳೂರಿನ ಮಹದೇವಪುರ ನಿವಾಸಿ ಇ ಸುರೇಶ್ ಬಿನ್ ಯತಿರಾಜುಲು(61) ಮಹಿಳೆಯರನ್ನು ವಂಚಿಸಿರುವ ಆರೋಪಿ. ಈತ ಡಿವೋರ್ಸಿ ಮ್ಯಾಟ್ರಿಮೋನಿ ಅಪ್ಲಿಕೇಶನ್ ಮೂಲಕ ವಿಧವೆ ಮತ್ತು ವಿಚ್ಛೇದಿತ ಮಹಿಳೆಯರ ಮೊಬೈಲ್ ನಂಬರ್ ಪಡೆದು, ಅವರೊಂದಿಗೆ ಮದುವೆಯಾಗುವುದಾಗಿ ಸಲುಗೆ ಬೆಳೆಸಿಕೊಳ್ಳುತ್ತಿದ್ದ.
ಆನಂತರ ನಾನಾ ನೆಪಗಳನ್ನೊಡ್ಡಿ ಮಹಿಳೆಯರಿಂದ ಲಕ್ಷಾಂತರ ಹಣ ಪಡೆಯುತ್ತಿದ್ದ. ಬಳಿಕ ಹಣ ಕೇಳಿದಾಗ ಹಣವನ್ನು ಕೊಡದೇ, ಮದುವೆಯನ್ನೂ ಆಗದೆ ಅನೇಕ ಮಹಿಳೆಯರನ್ನು ಯಾಮಾರಿಸುತ್ತಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಸದರಿ ಆರೋಪಿಯು ತಮಿಳುನಾಡು ಮೂಲದ ಮಹಿಳೆ, ಬೆಂಗಳೂರಿನ ಯಶವಂತಪುರ ಮಹಿಳೆ ಸೇರಿದಂತೆ ಅನೇಕ ಮಹಿಳೆಯರಿಗೆ ವಂಚಿಸಿರುವುದಾಗಿ ಗೊತ್ತಾಗಿದೆ.
ಈ ಕುರಿತು ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ನಗರದ ಮಹಿಳೆಯೊಬ್ಬರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಡಿವೈಎಸ್ಪಿ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ್, ಜಯಣ್ಣ, ವಿನಾಯಕ, ಬಾಲಾಜಿ ತನಿಖೆ ನಡೆಸಿದ್ದು, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ತಂಡವನ್ನು ಎಸ್ಪಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.