ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಆರಂಭವಾದ ‘ಕ್ರಾಂತಿಕಾರಿ ಪಾದಯಾತ್ರೆ’ ಶಿರಾ ನಗರಕ್ಕೆ ತಲುಪಿದೆ.
ಒಳಮೀಸಲಾತಿ ಕ್ರಾಂತಿಕಾರಿ ಪಾದಯಾತ್ರೆಯು ಹಿರಿಯೂರಿನಲ್ಲಿ ಕಾಂಗ್ರೆಸ್ ಸರಕಾರದ ಶವಯಾತ್ರೆ ಮಾಡಿದ್ದು, ಇಂದು ಮೂರು ದಿನಗಳ ನಂತರ ಕಾಂಗ್ರೆಸ್ ಸರಕಾರಕ್ಕೆ ಶ್ರದ್ಧಾಕಾರ್ಯ ಮಾಡುತ್ತಿದ್ದೇವೆ ಎಂದು ಪಾದಯಾತ್ರೆಯಲ್ಲಿ ತೊಡಗಿದ್ದವರು ಶಿರಾ ನಗರದಲ್ಲಿ ಶುಕ್ರವಾರ ಕೇಶ ಮುಂಡನ ಮಾಡಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.

ಕ್ರಾಂತಿಕಾರಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ ಇದು ಕಾಂಗ್ರೆಸ್ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ. ಒಳಮೀಸಲಾತಿ ಜಾರಿ ಮಾಡಿ ಇಲ್ಲವೇ ರಾಜೀನಾಮೆ ನೀಡಬೇಕು. ದೇಶದಲ್ಲಿ ಕಾಂಗ್ರೆಸ್ ಪಕ್ಷ 1950 ರಿಂದ ಇಲ್ಲಿಯವರೆಗೆ ಸಂವಿಧಾನದ ಪರವಾಗಿ ನಡೆದುಕೊಂಡಿಲ್ಲ. ಸಂವಿಧಾನಕ್ಕೆ ದೊಡ್ಡ ಅಪಚಾರ ಮಾಡಿರುವುದು ಕಾಂಗ್ರೆಸ್ ಪಕ್ಷ. ಇಷ್ಟೊಂದು ಉರಿ ಬಿಸಿಲಲ್ಲಿ ಹೋರಾಟಗಾರರು ಪಾದಯಾತ್ರೆ ಮಾಡುತ್ತಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ 4 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಆದರೂ ಈ ಕಾಂಗ್ರೆಸ್ ಸರಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲ, ಮಾನವೀಯತೆ ಇಲ್ಲ. ಇದೊಂದು ಮಾನವೀಯತೆ ಇಲ್ಲದ ಸರ್ಕಾರ ಎಂದು ದೂರಿದರು.

ಬಿಜೆಪಿ ಸರ್ಕಾರ 2022ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧು ಸ್ವಾಮಿ ಅವರ ಉಪಸಮಿತಿಯ ಶಿಫಾರಸ್ಸಿನಂತೆ ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಜಾತಿಗಳಿಗೆ ಶೇ. 5.5 ಭೋವಿ, ಲಂಬಾಣಿ ಜಾತಿಗಳಿಗೆ ಶೇ. 4, ಅಲೆಮಾರಿ ಜನಾಂಗಕ್ಕೆ ಶೇ. 1 ಮೀಸಲಾತಿ ನೀಡಿ ಅದನ್ನು ಗೆಜೆಟ್ ಆದೇಶ ಹೊರಡಿಸಿದ್ದಾರೆ. ಬಿಜೆಪಿ ಸರಕಾರದ ಆದೇಶ ಸರಿಯಾಗಿದೆ. ಅದರ ಪ್ರಕಾರ ಕಾಂಗ್ರೆಸ್ ಸರಕಾರ ಒಳಮೀಸಲಾತಿ ಜಾರಿ ಮಾಡಿ.ನಾಗಮೋಹನ್ ದಾಸ್ ಅವರು ಒಂದು ಮಧ್ಯಂತರ ಆದೇಶ ನೀಡಿ, ಬಿಜೆಪಿ ಸರಕಾರದ ಅವಧಿಯಲ್ಲಿ ನೀಡಿರುವ ವರದಿ ಅನುಸಾರ ಕೇಂದ್ರಕ್ಕೆ ಶೀಫಾರಸ್ಸು ಮಾಡುವಂತೆ ಆದೇಶ ನೀಡುವಂತೆ ಎಂದು ಎನ್ ಮಹೇಶ್ ಒತ್ತಾಯಿಸಿದರು.

ದಲಿತ ಮುಖಂಡ ಜೆ.ಎನ್.ರಾಜಸಿಂಹ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೀರಿ. ನಿಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದ್ದು, ನಿಮಗೆ ನೈತಿಕತೆ ಇದ್ದರೆ ಒಳಮೀಸಲಾತಿ ಜಾರಿ ಮಾಡಿ ಇಲ್ಲದಿದ್ದರೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.

ಮಾದಿಗ ಮಹಾಸಭಾದ ರಾಜ್ಯ ಸಂಚಾಲಕ ಎಸ್.ಆರ್.ರಂಗನಾಥ್ ಮಾತನಾಡಿ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹಮ್ಮಿಕೊಂಡಿರುವ ಕ್ರಾಂತಿಕಾರಿ ಪಾದಯಾತ್ರೆ ಮಾ. 21ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಲಿದೆ. ಈ ಸಮಾವೇಶಕ್ಕೂ ಮುನ್ನ ರಾಜ್ಯ ಸರಕಾರ ಒಳಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ರಾಜ್ಯ ಕಾಂಗ್ರೆಸ್ ಸರಕಾರವೇ ಹೊಣೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ದಂಡು ಜಿಲ್ಲಾಧ್ಯಕ್ಷ ಎನ್.ಕುಮಾರ್ ಮಾತನಾಡಿ ರಾಜ್ಯ ಸರಕಾರಕ್ಕೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಮಾ. 21ರೊಳಗೆ ರಾಜ್ಯ ಸಚಿವ ಸಂಪುಟದಲ್ಲಿ ಒಳಮೀಸಲಾತಿಯನ್ನು ಅನುಮೋದನೆ ಮಾಡಿ ಜಾರಿ ಮಾಡಿ. ಇಲ್ಲದಿದ್ದರೆ ಮಾ. 21 ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಹೋರಾಟ ನಡೆಸಲಿದ್ದೇವೆ ಎಂದರು.

ಪಾದಯಾತ್ರೆಯಲ್ಲಿ ಬಿ.ಆರ್.ಭಾಸ್ಕರ್ ಪ್ರಸಾದ್, ಕೊಟ್ಟ ಶಂಕರ್, ದಸಂಸ ತಾಲೂಕು ಅಧ್ಯಕ್ಷ ಟೈರ್ ರಂಗನಾಥ್, ವಕೀಲರಾದ ರಂಗಧಾಮಯ್, ಪಿ.ಬಿ.ನರಸಿಂಹಯ್ಯ, ಕೇಬಲ್ ರಘುಕುಮಾರ್, ಬಂಡೆ ಕುಮಾರ್, ಕ್ಯಾತ್ಸಂದ್ರ ಮೂರ್ತಿ, ಭರತ್ ಬೆಲ್ಲದಮಡು, ಪಿ.ಬಿ.ನರಸಿಂಹಯ್ಯ, ಗುಮ್ಮನಹಳ್ಳಿ ಮಂಜುನಾಥ್, ಸಕ್ರ ನಾಗರಾಜು, ಜಯರಾಮಕೃಷ್ಣ, ರವಿಕುಮಾರ್, ನರಸಿಂಹಮೂರ್ತಿ, ಗಜಮಾರನಹಳ್ಳಿ ಮಂಜುನಾಥ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.